ಹೈದರಾಬಾದ್: ಮಹಾಮಾರಿ ಕರೊನಾ ವೈರಸ್ ಸೋಂಕು ಬಂದ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ಯಾರು ಸಹ ಅತ್ಯಂತ ಕೀಳಾಗಿ ನೋಡಬಾರದು. ಸಾಮಾನ್ಯರಂತೆಯೇ ಅವರೊಬ್ಬ ರೋಗಿಯೇ ಹೊರತು ತೀರ ಬೇಡವಾದವರು ಎಂಬಂತೆ ನೋಡಬಾರದು ಎಂದು ಎಷ್ಟೇ ಅರಿವು ಮೂಡಿಸಿದರು ಅಂತಹ ಕಹಿ ಘಟನೆಗಳು ಮರುಕಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯೇ ಸರಿ.
ಕರೊನಾ ಸೋಂಕು ಬಂದಿದ್ದಕ್ಕೆ ಪಿಯು ವಿದ್ಯಾರ್ಥಿನಿಯೊಬ್ಬಳನ್ನು ಸುಮಾರು 13 ದಿನಗಳ ಕಾಲ ಬಲವಂತವಾಗಿ ಊರಿನಿಂದ ಹೊರಹಾಕಿದ್ದು, ಟೆಂಟ್ನಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿರುವ ಘಟನೆ ತೆಲಂಗಾಣದ ಆದಿಲ್ಬಾದ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಸನ್ ರೆಡ್ಡಿ ಅವರು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಡಿಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ.
ಕೋವಿಡ್ ರೋಗಿಗಳನ್ನು ಬಹಿಷ್ಕರಿಸುವುದು ಅಮಾನವೀಯ. ಕರೊನಾ ವಿರುದ್ಧ ಹೋರಾಡುವಾಗ ಒಬ್ಬರಿಗೊಬ್ಬರು ಸಹಕಾರ ನೀಡಿ, ಮುಂದೆ ಸಾಗಬೇಕು. ಕರೊನಾ ಬಂದಿದ್ದಕ್ಕೆ ಹುಡುಗಿಯನ್ನು ಹೊರಹಾಕಿದ ಘಟನೆ ದುರಾದೃಷ್ಟಕರ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ತೆಲಂಗಾಣ ಡಿಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆಂದು ಕಿಸನ್ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ.
ಕರೊನಾ ಪಾಸಿಟಿವ್ ಆಗಿದ್ದಕ್ಕೆ ನಿರ್ಮಲ್ ಜಿಲ್ಲೆಯ ಮುಧೋಳ್ನಲ್ಲಿರುವ ತೆಲಂಗಾಣ ಬುಡಕಟ್ಟು ಕಲ್ಯಾಣ ವಸತಿ ಕಾಲೇಜಿನಿಂದ ಸಲೆಗುಡ ಗ್ರಾಮದ ತನ್ನ ಮನೆಗೆ ಮಾರ್ಚ್ 19ರಂದು ಹುಡುಗಿ ವಾಪಸಾದಾಗ ಗ್ರಾಮಸ್ಥರು ಆಕೆಗೆ ಅನುಮತಿ ನೀಡಲಿಲ್ಲ. ಇತರರಿಗೆ ಸೋಂಕು ಅಂಟಿಸಿಬಿಡುತ್ತಾಳೆ ಎಂಬ ಭಯದಿಂದ ಹುಡುಗಿಗೆ ಗ್ರಾಮದ ಒಳಗೆ ಬರಲು ಅನುಮತಿಯನ್ನೇ ನೀಡಲಿಲ್ಲ.
ಆದಾಗ್ಯು, ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಗ್ರಾಮಸ್ಥರಿಂದ ಯಾವುದೇ ಒತ್ತಾಯವಿಲ್ಲದೆ ಹುಡುಗಿ ಸ್ವಯಂಪ್ರೇರಣೆಯಿಂದ ಪ್ರತ್ಯೇಕತೆವಾಗಿದ್ದಾಳೆ ಅಂದುಕೊಂಡರು. ಮಂಗಳವಾರ ಎರಡನೇ ಪರೀಕ್ಷೆ ನಡೆಸಿದ ಅಧಿಕಾರಿಗಳು ಹುಡುಗಿಗೆ ನೆಗಿಟಿವ್ ವರದಿ ಬಂದಾಗ ಮನೆಗೆ ಕಳುಹಿಸಿಕೊಡಲಾಯಿತು.
ಈ ವಿಚಾರದಲ್ಲಿ ಪರ-ವಿರೋಧ ಚರ್ಚೆಗಳು ಸಹ ಕೇಳಿಬರುತ್ತಿದೆ. ಕೆಲವರು ಸ್ವತಃ ಹುಡುಗಿಯೇ ಪ್ರತ್ಯೇಕವಾಗಿದ್ದಳು. ಗ್ರಾಮಸ್ಥರು ಸಹ ಕಾಲ ಕಾಲಕ್ಕೆ ಆಹಾರ ನೀಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಕೆಲ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ, 13 ದಿನಗಳ ಕಾಲ ಯುವತಿಯನ್ನು ಏಕಾಂಗಿಯಾಗಿ ಊರಿನ ಹೊರಭಾಗದಲ್ಲಿ ಇರಿಸಿದ್ದು ಸರಿಯಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.