ನವದೆಹಲಿ : ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ದೀರ್ಘ ಕೋಮಾ ಸ್ಥಿತಿಯಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿಧಿವಶರಾಗಿದ್ದಾರೆ.
ಭಾರತದ 13ನೇ ರಾಷ್ಟ್ರಪತಿಯಾಗಿ, ದೇಶದ ಆರ್ಥಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ (84) ಅವರ ಮೆದುಳು ಶಸ್ತ್ರಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿರುವ ಘಟನೆ ಸೋಮವಾರ (ಆಗಸ್ಟ್ 31, 2020)ನಡೆದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ 84 ವರ್ಷದ ಪ್ರಣಬ್ ಮುಖರ್ಜಿ ಅವರನ್ನು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ (Blood clot) ಸಮಸ್ಯೆ ಉದ್ಭವವಾಗಿತ್ತು. ಹೀಗಾಗಿ ಪ್ರಣಬ್ ಅವರಿಗೆ ತುರ್ತಾಗಿ ಮಿದುಳು ಚಿಕಿತ್ಸೆಯನ್ನು ಮಾಡಲಾಗಿತ್ತು.
ಆದರೆ, ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು. ಆದರೂ ಮಿದುಳು ಶಸ್ತ್ರ ಚಿಕಿತ್ಸೆಯನ್ನು ಮುಗಿಸಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್ ಸಪೋರ್ಟ್) ಮಾಡುವ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು.