ಬೆಂಗಳೂರು: ಖಾಸಗಿ ದೇಗುಲಗಳಿಗೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲಾಗಿರುವ ಸುತ್ತೋಲೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಖಾಸಗಿ ದೇವಾಲಯಗಳನ್ನು ವಶಪಡಿಸಿಕೊಳ್ಳುವ ಚಿಂತನೆ ಸರ್ಕಾರಕ್ಕಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇವಾಲಯಗಳನ್ನು ನೋಂದಾವಣೆ ಮಾಡಿಕೊಳ್ಳಬೇಕು ಎಂದು 2019 ರಲ್ಲಿಯೇ ಧಾರ್ಮಿಕ ದತ್ತಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದು ಸರ್ಕಾರದ ವಶಕ್ಕೆ ಖಾಸಗಿ ದೇಗುಲಗಳನ್ನು ಒಳಪಡಿಸುವ ಉದ್ದೇಶದಿಂದಲ್ಲಿ. ಹಾಗೆಯೇ ಖಾಸಗಿ ದೇಗುಲಗಳ ಮೇಲೆ ಸರ್ಕಾರ ನಿಗಾ ವಹಿಸಲಿದೆ ಎಂಬ ಆತಂಕವೂ ಬೇಡ. ಈ ಸುತ್ತೋಲೆ ನೋಂದಣಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ದೇಗುಲಗಳಿಗೆ ನೆನಪಿಸಿಕೊಡುವ ಹಿನ್ನೆಲೆಯಲ್ಲಿ ಮಾತ್ರ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
2011 ನೇ ವರ್ಷದಲ್ಲಿ ಈ ಕಾಯ್ದೆಯನ್ನು ತರಲಾಗಿದೆ. 2015ರಲ್ಲಿ ಈ ಕಾಯ್ದೆ ಜಾರಿಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಅಂದರೆ 2016 ರಿಂದ 2020ರ ವರೆಗೆ ಪ್ರತಿ ವರ್ಷವೂ ಈ ಸುತ್ತೋಲೆಯನ್ನು ನೀಡುತ್ತಾ ಬರಲಾಗಿದೆ. ಈ ಬಾರಿಯೂ ಹಾಗೆಯೇ ಸುತ್ತೋಲೆ ಕಳುಹಿಸಲಾಗಿದೆ. ಇದು ಖಾಸಗಿ ದೇವಾಲಯಗಳನ್ನು ವಶಕ್ಕೆ ಪಡೆಯುವುದಕ್ಕಾಗಿ ಕಳುಹಿಸಲಾದ ಸುತ್ತೋಲೆಯಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.