ಮಳೆ ಮಾಯವಾಯಿತು…ಬರಗಾಲಕ್ಕೆ ಪಾಯವಾಯಿತು. ಮುಂದಿನ ಬರಗಾಲದ ದಿಬ್ಬಣ ಹೊರಟಿದೆ, ಕ್ಷಾಮದ ಓಡ್ಡೋಲಗ ಚೆನ್ನಾಗಿರಬಹುದು. ಅನುಭವಿಸಲೇಬೇಕು ಬರಲಿರುವ ಬರಗಾಲವನ್ನು!

ಬರಹ 🖊️.ದಿನೇಶ್ ಹೊಳ್ಳ.

ಮಳೆ ಮಾಯವಾಯಿತು…ಬರಗಾಲಕ್ಕೆ ಪಾಯವಾಯಿತು. ಮುಂದಿನ ಬರಗಾಲದ ದಿಬ್ಬಣ ಹೊರಟಿದೆ, ಕ್ಷಾಮದ ಓಡ್ಡೋಲಗ ಚೆನ್ನಾಗಿರಬಹುದು. ಅನುಭವಿಸಲೇಬೇಕು ಬರಲಿರುವ ಬರಗಾಲವನ್ನು.

‘ಬರ’ ಬೇಡ ಎನ್ನಲು, ನಿಸರ್ಗದ ಪ್ರ(ತಿ )ಕ್ರಿಯೆಯನ್ನು ತಡೆಯಲು ಯಾರಿಗೂ ಹಕ್ಕಿಲ್ಲ, ನಿಸರ್ಗದ ಮೌನದ ಮಾತಿನ ಎದುರು ಕೈ ಕಟ್ಟಿ, ಬಾಯಿ ಮುಚ್ಚಿಕೊಳ್ಳಬೇಕಾದ ಅಪರಾಧಿಗಳು ನಾವು, ನೀವು ಎಲ್ಲರೂ. ಆಗಸ್ಟ್ ತಿಂಗಳು ಕಳೆದು ಸೆಪ್ಟೆಂಬರ್ ಕಡೆಗೆ ಸಾಗುತ್ತಿದ್ದೇವೆ.

ಜುಲೈ ನಲ್ಲಿ ಒಂದು ವಾರ ನಿರಂತರ ಮಳೆ ಬಂದದ್ದು ಬಿಟ್ಟರೆ ಮಳೆಗಾಲದ ವಾಡಿಕೆಯ ಮಳೆ ಎಲ್ಲೂ ಆಗಿಲ್ಲ. ಇನ್ನು ಎಲ್ಲಾದರೂ ಸೆಪ್ಟೆಂಬರ್, ಅಕ್ಟೊಬರ್ ನಲ್ಲಿ ಸ್ವಲ್ಪ ಮಳೆ ಸುರಿಯಲೂ ಬಹುದು, ಬಾರದೆಯೂ ಇರಬಹುದು. ಅಂತೂ, ಇಂತೂ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನೀರಿನ ಸಮಸ್ಯೆಯಾಗಿ ಬರಗಾಲದ ದಿನಗಳಿಗೆ ಆಮಂತ್ರಣ ನೀಡಲಾಗಿದೆ. ಬರಭಾಗ್ಯದ ಸಂಕಟಗಳನ್ನು ಅನುಭವಿಸಲೇಬೇಕು.ಯಾಕೆ ಮಳೆ ಮಾಯವಾಯಿತು ? ಬರಬೇಕಿತ್ತಲ್ವಾ? ಬರದಂತೆ ಮಾಡಿದವರು ಯಾರು? ನಾವೆಲ್ಲರೂ ಅಪರಾಧಿಗಳೇ ಆಗಿರುವಾಗ ಪ್ರಶ್ನಿಸುವುದಾದರೂ ಯಾರನ್ನು? ಉತ್ತರಿಸುವವರಾದರೂ ಯಾರು ?ಇಂದು ಮಳೆ ಬರುವುದೋ..ನಾಳೆ ಬರುವುದೋ ಎಂದು ಆಕಾಶದ ಕಡೆ ನೋಡುವ ನಾವೇ ಉತ್ತರಿಸಲಾಗದ ಅಪರಾಧಿಗಳಂತೆ ತಲೆ ತಗ್ಗಿಸಬೇಕಾಗುತ್ತದೆ.

ಕಳೆದ ಹತ್ತು ವರುಷಗಳಿಂದ ಮಳೆಯ ಒಂದು ಲೆಕ್ಕಾಚಾರ ಹಾಕುತ್ತಾ ಬಂದರೆ ಜೂನ್ ನಿಂದ ಅಕ್ಟೊಬರ್ ತನಕ ಮಳೆಯ ಸುರಿಯುವಿಕೆಯಲ್ಲಿ ಏರು ಪೇರು ಆಗುತ್ತಾ ಬರುತಿತ್ತು. ಅತಿವೃಷ್ಟಿ, ಅನಾವೃಷ್ಟಿ ಎಂಬ ಹೊಸ ‘ ಸೃಷ್ಟಿ ‘ ಗಳ ಅನಾವರಣ ಆಗುತ್ತಲೇ ಇತ್ತು. ಯಾಕೆ ಹಿಂದೆ ಮಳೆಗಾಲ ಚೆನ್ನಾಗಿಯೇ ಇತ್ತು, ಯಾಕೆ ಈಗ ಹತ್ತು ವರುಷಗಳಲ್ಲಿ ಮಳೆಗಾಲದ (ಆ)ವೇಷ ಬದಲಾಗುತ್ತಾ ಬಂತು ಎಂದು ಯೋಚಿಸಲು ಯಾರಿಗೂ ಪುರುಸೊತ್ತೇ ಇರಲಿಲ್ಲ. ಯಾಕೆಂದರೆ ಅದು ನಮ್ಮ ಸೊತ್ತು ಅಲ್ಲ ಪರ ಸೊತ್ತು ಆಗಿರುವುದರಿಂದ ಅರಿಯುವ ಹೊತ್ತು ಇರಲಿಲ್ಲ, ಹೊತ್ತು ಇದ್ದವರಿಗೆ ಗೊತ್ತು ಇರಲಿಲ್ಲ, ಗೊತ್ತು ಇದ್ದವರಿಗೆ ಹೊತ್ತು ಇರಲಿಲ್ಲ., ಒಟ್ಟಾರೆ ಆಧುನಿಕ ಸಾಮ್ರಾಜ್ಯದ ಜನತೆಗೆ ಬೇಕಿರುವುದು ಪ್ರಕೃತಿಯ ನೆಮ್ಮದಿ, ಒಳಿತು, ಸಂರಕ್ಷಣೆಯಲ್ಲ.ಜಾತಿ, ಧರ್ಮ, ಪಕ್ಷ, ರಾಜಕೀಯ..ಈ ಘನಾಂದ ಕೆಲಸಗಳಲ್ಲೇ ಕಚ್ಚಾಡಿಕೊಳ್ಳುವವರಿಗೆ ಅದಕ್ಕೇ ಹೊತ್ತು ಸಾಕಾಗದವರು ಇನ್ನು ಪರಿಸರ, ಮಳೆ, ನದಿ, ಕಾಡು ಅಂತ ಎಲ್ಲಿ, ಯಾವಾಗ ಜಾಗೃತರಾದಾರು? ಇನ್ನು ನಮ್ಮನ್ನಾಳುವ ದಿಗ್ಗಜರಿಗೆ ಪರಿಸರ, ಪೃಕೃತಿ ಎಲ್ಲವೂ ಧನ ದಂಧೆಯ ಸರಕು ಅಷ್ಟೇ ಹೊರತು ಬೇರೇನಲ್ಲ. ‘ ಅಭಿವೃದ್ಧಿ ‘ ಎಂಬ ನೆಪದಲ್ಲಿ ಪಶ್ಚಿಮ ಘಟ್ಟವನ್ನು, ನದಿಗಳನ್ನು ನಾಶ ಮಾಡಿಕೊಂಡು ಬಂದದ್ದೇ ಹೊರತು ಸಂರಕ್ಷಣೆಯ ವಿಚಾರ ಮಾತ್ರ ಶೂನ್ಯ. ಅವರಿಗೆ ವಿಪರೀತ ಮಳೆ ಬಂದು ದುರಂತಗಳೇ ಆದರೂ, ಮಳೆ ಬಾರದೇ ಬರಗಾಲವಾದರೂ ಖುಷಿಗಳ ಬಂಪರ್.. ಎರಡರಲ್ಲೂ ಪರಿಹಾರ ಎಂಬ ಧನ ಗಂಟು ಮೂಟೆಗಳಲ್ಲಿ ಷೇರು ಮತ್ತು ಕಾರುಬಾರು.

ಪಶ್ಚಿಮ ಘಟ್ಟ ಎಂಬುದು ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ. ಎಲ್ಲಾ ನದಿಗಳ ಉಗಮ ಸ್ಥಾನಗಳೂ ಇದೇ ಪಶ್ಚಿಮ ಘಟ್ಟದಲ್ಲಿ ಇರುವುದು. ಇಂತಹ ನದೀ ಮೂಲಗಳ ಸೂಕ್ಷ್ಮ ಜೈವಿಕ ಪ್ರದೇಶಗಳ ಮೇಲೆ ಕಳೆದ 10 ವರುಷಗಳಿಂದ ಬೇರೆ ಬೇರೆ ಪರಿಸರ ವಿನಾಶಕ, ಅಸಂಬದ್ಧ, ಅವೈಜ್ಞಾನಿಕ ಯೋಜನೆಗಳಿಂದ ಮಾರಣಾ0ತಿಕ ಏಟು ಬೀಳುತ್ತಾ ಬಂದಿದೆ. ಪಶ್ಚಿಮ ಘಟ್ಟದ ಅರಣ್ಯ ಒತ್ತುವರಿ ಮಾಡಿ ಖಾಸಗಿ ತೋಟ, ಅಕ್ರಮ ರೆಸಾರ್ಟು, ಗಣಿಗಾರಿಕೆ, ನದಿ ತಿರುವು, ವೃಕ್ಷ ರಾಕ್ಷಸರ ಟಿ0ಬರ್ ಮಾಫಿಯಾ, ಕೃತಕ ಕಾಡ್ಗಿಚ್ಚು ಹೀಗೇ ಬೇರೆ ಬೇರೆ ಕಾರಣಗಳಲ್ಲಿ ಪಶ್ಚಿಮ ಘಟ್ಟದ ಮಳೆ ( ಶೋಲಾ ) ಕಾಡಿಗೆ ಸಹಿಸಲಾಗದ ಗೀರು ಗಾಯಗಳು ಆಗುತ್ತಾ ಬಂದಿರುತ್ತದೆ. ಮಳೆ ನೀರನ್ನು ತನ್ನೊಡಲ ಒಳಗೆ ಬಚ್ಚಿಟ್ಟುಕೊಂಡು ವರ್ಷ ಪೂರ್ತಿ ಹೊಳೆಗಳನ್ನು ಜೀವಂತವಾಗಿ ಇಟ್ಟುಕೊಳ್ಳುವ ಪಶ್ಚಿಮ ಘಟ್ಟದ ಹುಲ್ಲುಗಾವಲು ಮತ್ತು ಶೋಲಾರಣ್ಯವನ್ನು ನಿರ್ಧಾಕ್ಷಿನ್ಯವಾಗಿ ವೋಟು – ನೋಟು – ಸೀಟು ಗಳಿಸುವ ಯಾವುದೋ ಅಸಂಬದ್ಧ ಯೋಜನೆಗಾಗಿ ಬಲಿ ಕೊಡುತ್ತಾ ಬಂದರೆ ಮಳೆ ಮಾಯವಾಗಿ ಇನ್ನೇನು ಆಗಲು ಸಾಧ್ಯ ? ಕಳೆದ 5 ವರುಷಗಳಿಂದ ಪಶ್ಚಿಮ ಘಟ್ಟದಲ್ಲಿ ಭೂಕುಸಿತ, ಜಲ ಪ್ರವಾಹಗಳು ಆದಾಗ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಪಶ್ಚಿಮ ಘಟ್ಟದ ನಿರಂತರ ಫಲಾನುಭವಿಗಳಾದ ಈ ರಾಜ್ಯದ ಜನತೆ ಯೋಚಿಸಬೇಕಿತ್ತು ಈ ಪ್ರಾಕೃತಿಕ ದುರಂತಗಳ ಹಿಂದೆ ಏನಿದೆ ಮತ್ತು ಇದರಿಂದ ಮುಂದೆ ಏನಾಗಲಿದೆ ? ಎಂದು. ಭೂಕುಸಿತ, ಜಲ ಪ್ರವಾಹ ಆಗುತ್ತಲೇ ಇದೆ, ಅದರ ನಂತರ ಬರಗಾಲದ ದಿನಗಳೂ ಮುಂದುವರಿಯುತ್ತಲೇ ಇದೆ. ಅದರ ಬಗ್ಗೆ ಯಾರಿಗೂ ಚಿಂತೆ ಆಗಲಿ, ಚಿಂತನೆ ಮಾಡಲು ಹೊತ್ತೇ ಸಿಗುವುದಿಲ್ಲ. ಪಶ್ಚಿಮ ಘಟ್ಟದ ಮಳೆ ನೀರು ಇಂಗಿತ ಆಗುವ ಹುಲ್ಲಗಾವಲು ಮತ್ತು ಶೋಲಾ ಅಡವಿಯು ಭೂಕುಸಿತವಾಗಿ ಬಹಳಷ್ಟು ನೀರಿನ ಒರತೆ ಪ್ರದೇಶಗಳು ಬರಿದಾಗಿ ಎಷ್ಟೇ ಮಳೆ ಸುರಿದರೂ ಹೊಳೆಗಳ ಸರಾಸರಿ ನೀರು ಮುಂದಿನ ಮಳೆಗಾಲಕ್ಕೆ ಸಮತೋಲನವಾಗದೇ ಪಶ್ಚಿಮ ಘಟ್ಟದಲ್ಲಿ ಆಗಲಿ, ಸಾಗರ, ಸಮುದ್ರಗಳಲ್ಲಿ ಆಗಲಿ ನೈಸರ್ಗಿಕ ಅಸಮತೋಲನ ಉಂಟಾಗಿ ಮಳೆ ಜಾಸ್ತಿ ಬಂದರೂ ನೀರಿನ ಶೇಖರಣೆಯಲ್ಲಿ ವ್ಯತ್ಯಯ ಆಗುತ್ತಾ ಬಂದಿರುವ ಕಾರಣ ಮಳೆ ಕಡಿಮೆಯಾಗುತ್ತಿದೆ. ಸಾಗರ, ಸಮುದ್ರಗಳಲ್ಲಿ ನಗರದ ತ್ಯಾಜ್ಯ ನೀರು, ಕಾರ್ಖಾನೆಗಳ ವಿಷಮಯ ನೀರು ಸೇರಿ ಸಮುದ್ರ ನೀರಿನ ಒಳಮೈ ಮತ್ತು ಮೇಲಮೈನಲ್ಲಿ ಶಾಖ ಹೆಚ್ಚಾಗಿ ಮಳೆ ಗಾಲ ತನ್ನ ವ್ಯಾಪ್ತಿಯನ್ನು ಬದಲಾಯಿಸುತ್ತಿರುತ್ತದೆ. ಪಶ್ಚಿಮ ಘಟ್ಟದಲ್ಲೂ ನಿರಂತರ ಭೂಕುಸಿತವಾಗಿ ಸೂರ್ಯನ ಕಿರಣಗಳಿಂದ ಮುಚ್ಚಿರುವ ಮಳೆ ನೀರಿನ ಇಂಗಿತ ಪ್ರದೇಶಗಳು ಓಪನ್ ಆಗಿ ಮಳೆ ನೀರು ಶೋಲಾ ಅಡವಿಯ ಒಳಗಿನ ಶಿಲಾ ಪದರಗಳಲ್ಲಿ ಶೇಖರಣೆ ಆಗದೇ ನೇರವಾಗಿ ಹರಿದು ಹೋಗುವ ಕಾರಣ ಮಳೆಗಾಲದ ಚೌಕಟ್ಟು ಕಿರಿದಾಗುತ್ತಿದೆ. ಪಶ್ಚಿಮ ಘಟ್ಟದ ಮೇಲೆ ಇರುವ ಹುಲ್ಲಗಾವಲು ನಮ್ಮ ಶರೀರಕ್ಕೆ ಚರ್ಮ ಹೇಗೆ ರಕ್ಷಣೆಯೊ ಅದೇ ರೀತಿ ಬೆಟ್ಟದ ಹುಲ್ಲಿನ ಹೊದಿಕೆ ಅಲ್ಲಿಗೆ ಭದ್ರತೆ..ಆದರೆ ಈಗ ಕೆಲವು ವರುಷಗಳಿಂದ ಮಾನವ ನಿರ್ಮಿತ ನಿರಂತರ ಕಾಡ್ಗಿಚ್ಚು ಕೂಡಾ ಮಳೆ ನೀರು ಸಂಗ್ರಹಕ್ಕೆ ಅಡ್ಡಿಯಾಗುತ್ತಿದೆ.ಒಟ್ಟಾರೆ ಮಾನವ ನಿರ್ಮಿತ ಅನಾಹುತಕ್ಕೆ ಮಳೆಗೆ ಬೈದರೆ ಆಗುತ್ತದೆಯೇ? ನಮ್ಮ ರಾಜಕೀಯ ವ್ಯವಸ್ಥೆ ಇಂತಹ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುವ ಅಸಂಬದ್ಧ ಯೋಜನೆಗಳನ್ನು ಮಾಡುವಾಗ ಪ್ರಜೆಗಳಾದ ನಾವು ಎಷ್ಟು ಮಾತಾಡಿದ್ದೇವೆ? ಎಷ್ಟು ವಿರೋಧ ವ್ಯಕ್ತ ಪಡಿಸಿದ್ದೇವೆ? ಎಷ್ಟು ಪ್ರಶ್ನಿಸಿದ್ದೇವೆ ?ಪ್ರಕೃತಿ ಅದರ ಪಾಡಿಗೆ ನಮ್ಮ ನೆಮ್ಮದಿಗೆ ಪೂರಕವಾಗಿ ಕೆಲಸ ಮಾಡುತಿತ್ತು. ಇಂತಹ ಪ್ರಕೃತಿಗೆ ( ತಾಯಿ ಸಮಾನವಾದ ದೇವ ಸ್ವರೂಪಿ ) ನಾವೆಷ್ಟು ದೌರ್ಜನ್ಯ, ದಬ್ಬಾಳಿಕೆ, ವಿಕೃತ ಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇವೆ? ತಾಯಿಯ ವೇದನೆ, ರೋದನ, ಕಣ್ಣೀರಿಗೆ ಅನುಕಂಪ ತೋರದೇ ಇದ್ದರೆ ಅದರ ಪ್ರತಿಫಲ, ಪ್ರತೀಕಾರ ವನ್ನು ಅನುಭವಿಸಲೇಬೇಕು. ತಾಯಿ ಶಾಪದಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಅಸಾಧ್ಯ..ಮುಂದಿನ ಬರಗಾಲದ ಆಮಂತ್ರಣ ಈಗಾಗಲೇ ಲಭಿಸಿದೆ. ಕಾರಣ ಹೇಳದೇ ( ವೇದನೆಯ ) ತೋರಣ ಕಟ್ಟೋಣ.ಮಳೆ ಕಾಡು ಮತ್ತು ನದೀ ಮೂಲಗಳ ಮಹತ್ವ – ಅಗತ್ಯಗಳನ್ನು ಅರಿಯದೇ ಹೋದರೆ ಪಶ್ಚಿಮ ಘಟ್ಟದ ಸತ್ಯ – ಸತ್ವವನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಬರಗಾಲದಂತಹ ಮತ್ತು ಇನ್ನಿತರ ನೈಸರ್ಗಿಕ ದುರಂತಗಳ ಸರಮಾಲೆಯ ಸನ್ಮಾನವನ್ನು ಖುಷಿ ಇಲ್ಲದಿದ್ದರೂ ಮಾಡಿಸಿಕೊಳ್ಳಲೇಬೇಕಾಗುತ್ತದೆ.

ಪ್ರಕೃತಿಯ ಸತ್ವದ ಅಂತರ್ ಸತ್ಯಗಳನ್ನು ಅರ್ಥ ಮಾಡಿಕೊಳ್ಳದೇ ಹೋದರೆ ಸಹಜ ಚಿತ್ರಗಳು ಕೂಡಾ ವಿಚಿತ್ರವಾಗುತ್ತವೆ.ಅರ್ಥ ಮಾಡಿ ಕೊಳ್ಳಬೇಕಾದವರು ನಾವು…ನೀವು…..ಎಲ್ಲರೂ….

🖊️ದಿನೇಶ್ ಹೊಳ್ಳ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 114 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 277 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 191 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 294 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 154 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 87 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ