ಬೆಂಗಳೂರು: ಎರಡು ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಯಶಸ್ವಿಯಾಗಿ ನಡೆದಿದ್ದು,ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.ಗ್ರಾಮೀಣ ಭಾಗದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದ್ದು, ಫಲಿತಾಂಶ ಹೊರ ಬೀಳಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಎಲ್ಲಾ ಮತ ಎಣಿಕಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಡಿಸೆಂಬರ್ 29 ರಂದು ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 30 ರ ಮಧ್ಯರಾತ್ರಿ 12 ಗಂಟೆಯವರೆಗೆ 144 ರಂತೆ ನಿಷೇಧಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ಮತ ಎಣಿಕಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಮೆರವಣಿಗೆ, ವಿಜಯೋತ್ಸವ, ಬಹಿರಂಗ ಸಭೆ-ಸಮಾರಂಭಗಳನ್ನು ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಾಸ್ತಾ-ರೋಖ ಹಾಗೂ ಮುತ್ತಿಗೆ ನಡೆಸುವುದನ್ನು ನಿಷೇಧಿಸಲಾಗಿದೆ.
ಶಸ್ತ್ರಗಳು, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು, ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಯಾವುದೇ ಸಂರಕ್ಷಾರ ಪದಾರ್ಥ ಅಥವಾ ಸ್ಪೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ, ಉಪಕರಣಗಳ ಒಯ್ಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಸುವ್ಯಸವ್ಥೆಗೆ ಭಾದೆಯನ್ನುಂಟು ಮಾಡಬಹುದಾದ, ರಾಜ್ಯದ ಭದ್ರತೆಯನ್ನು ಕಡೆಗಣಿಸಬಹುದಾದ ಅಥವಾ ಅಪರಾಧವನ್ನು ಮಾಡಲು ಪ್ರಚೋಧಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಡ ನಿಷೇಧಿಸಲಾಗಿದೆ. ಹಾಡು, ಸಂಗೀತ, ಆವೇಶ ಭಾಷಣ, ಇಂಗಿತ ಸೂಚನೆಗಳು, ಅಂಕ ನಿರೂಪಣೆಗಳು, ಚಿತ್ರಗಳನ್ನು, ಸಂಕೇತಗಳನ್ನು ಭಿತ್ತಿ ಪತ್ರಗಳನ್ನು ಇತರ ಯಾವುದೇ ವಸ್ತು ಅಥವಾ ಪದಾರ್ಥವನ್ನು ತಯಾರಿಸುವುದು, ಪ್ರದರ್ಶಿಸುವುದನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.