ಹಾಸನ: ಮಲೆನಾಡು ಪ್ರದೇಶದಲ್ಲಿ ಮಳೆಹಾನಿಗೊಳಗಾದ ಶಿರಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳು ಸಂಚಾರಕ್ಕೆ ಮುಕ್ತವಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ಲಘುವಾಹನಗಳು ಮತ್ತು ಬಾರಿ ವಾಹನಗಳು 22/08/2021ರಿಂದ ಜಾರಿಗೆ ಬರುವಂತೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಂಚರಿಸಲು ಮುಕ್ತ ಅವಕಾಶ ನೀಡಲಾಗಿದೆ.
ಇಲ್ಲಿನ ಸಕಲೇಶಪುರದ ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಸಂಭವಿಸಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಿತ್ತು. ಶಿರಾಡಿ ಘಾಟ್ ಮೂಲಕ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು. ಕಳೆದ ಕೆಲವು ದಿನಗಳಿಂದ ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆ ಕಾರಣದಿಂದ ವಾಹನ ಸವಾರರು ಚಾರ್ಮಾಡಿ ಘಾಟ್ ಮೂಲಕ ಸಂಚಾರ ನಡೆಸುವ ಸನ್ನಿವೇಶ ಎದುರಾಗಿತ್ತು. ಆದರೆ, ನಿನ್ನೆ ಚಾರ್ಮಾಡಿ ಘಾಟ್ನಲ್ಲೂ ರಾತ್ರಿ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜೊತೆಗೆ, ಘನ ವಾಹನಗಳ ಪ್ರಯಾಣ ನಿರ್ಬಂಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟ ಮತ್ತಷ್ಟು ಹೆಚ್ಚಾಗಿತ್ತು. ಬದಲಿ ಮಾರ್ಗವಾಗಿ ರಾತ್ರಿ ಪ್ರಯಾಣ ಮಾಡುವವರು ಮಡಿಕೇರಿ ಮೂಲಕವೇ ಸಂಚಾರ ನಡೆಸಬೇಕಿತ್ತು. ಈ ಕಾರಣದಿಂದ ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ತೆರೆದು ಒಂದು ತಿಂಗಳಲ್ಲಿ ಸಂಪೂರ್ಣ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸ್ಥಳ ಪರಿಶೀಲನೆ ಬಳಿಕ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಸಕಲೇಶಪುರದ ದೋಣಿಗಾಲ್ ನಲ್ಲಿ ಕಂದಾಯ ಸಚಿವ ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ, ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗಿ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದೆ. ಆದರೆ, ಕೆಲವು ನಿಯಮಗಳನ್ನು ತಿಳಿಸಲಾಗಿದೆ.
ಅದರಂತೆ, ಶಿರಾಡಿ ಘಾಟ್ ರಸ್ತೆ ಇಂದಿನಿಂದಲೇ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ, ಲಘು ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಂದೆ, ಒಂದು ತಿಂಗಳಲ್ಲಿ ಸಂಪೂರ್ಣ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸ್ಥಳ ಪರಿಶೀಲನೆ ಬಳಿಕ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.