ಶಿಡ್ಲಘಟ್ಟ: ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿಯವರ 151ನೇ ಜನ್ಮದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಡ್ಲಘಟ್ಟ ಯೋಜನಾ ಕಛೇರಿಯಲ್ಲಿ ಸರಳ ಕಾರ್ಯಕ್ರಮವನ್ನು ನಡೆಸಲಾಯಿತು.
151ನೇ ಗಾಂಧಿಜಯಂತಿಯ ಪ್ರಯುಕ್ತ ಗಾಂಧಿಸ್ಮರಣೆಯ ಜೊತೆಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಕುರಿತು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡುತ್ತಾ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಅದೆಷ್ಟೊ ಮಹಾಪುರುಷರಿದ್ದಾರೆ. ಆದರೆ ಮಹಾತ್ಮ ಅಂತ ಅನಿಸಿಕೊಂಡಿದ್ದು ಗಾಂಧೀಜಿ ಮಾತ್ರ. ಕಾರಣ ಅವರ ತತ್ವಾದರ್ಶಗಳು ಬಾಳಿ ಬದುಕಿದ ರೀತಿ ಸರಳತೆ ಅವರನ್ನು ಇಡೀ ವಿಶ್ವವೇ ಮಹಾತ್ಮ ಅಂತ ಸಂಭೋಧಿಸುವಂತೆ ಮಾಡಿತ್ತು ಎಂದರು.
ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯರಾದ ತ್ಯಾಗರಾಜ್ ರವರು ಮಾತನಾಡುತ್ತಾ ಗಾಂಧೀಜಿಯವರು ಜೀವನದಲ್ಲಿ ಸತ್ಯ ಮತ್ತು ಅಹಿಂಸೆಗೆ ಪ್ರಥಮ ಆದ್ಯತೆ ನೀಡಿದ್ದರು ಮತ್ತು ಅದರಂತೆ ಬದುಕಿದರು ಎಂದರು.
ವೆಂಕಟಸ್ವಾಮಿಯವರು ಮಾತನಾಡಿ ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಗಾಂಧೀಜಿಯವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು ಎಂದು ತಿಳಿಸಿದರು. ಸುರೇಶ್ ಹಿತ್ತಲಹಳ್ಳಿಯವರು ಮಾತನಾಡುತ್ತಾ ಧರ್ಮಸ್ಥಳದ ಧರ್ಮಾಧಿಕಾರಿಗಳು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡುತ್ತಿದ್ದಾರೆ.. ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.