ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ದೇವದುರ್ಗ ತಾಲೂಕಿನ ವತಿಯಿಂದ ಮುರಿಗೆಪ್ಪ ಖೇಣೇದ್ ಫಂಕ್ಷನ್ ಹಾಲ್ ನಲ್ಲಿ ದಿನಾಂಕ 28/09/2024 ಶನಿವಾರದಂದು ತಾಲೂಕು ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸುರೇಶ ಅಣ್ಣಪ್ಪ ಸವದಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಪ್ರದೇಶಗಳಲ್ಲಿ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಕಾರ್ಯ ಮಾಡುತ್ತಿದ್ದು ಇದು ಬಹಳ ಶ್ಲಾಘನೀಯವಾಗಿದೆ. ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಂಡು, ಸಮಾನವಾಗಿ ಬೆಳೆಯಲು ಅವಕಾಶ ಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಸಹಕಾರಿಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಆಶಯಗಳನ್ನು ಅರಿತುಕೊಂಡು ತಾವೆಲ್ಲರೂ ಮುನ್ನಡೆದಲ್ಲಿ ತಮ್ಮ ಸರ್ವತೋಮುಖ ಅಭಿವೃದ್ಧಿ ಕಂಡಿತ ಸಾಧ್ಯವಾಗುತ್ತದೆ. ಮಹಿಳೆಯರಿಗಾಗಿ ನ್ಯಾಯಾಲಯದಲ್ಲಿ ಉಚಿತ ಕಾನೂನಿನ ಅರಿವು ಮತ್ತು ನೇರವು ಅವಕಾಶಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಂದಿನ ಸಮಾಜದಲ್ಲಿ ಮಕ್ಕಳು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ದಾರಿ ತಪ್ಪುತ್ತಿದ್ದು, ಅಪಾಯದ ಕೆಲಸದಲ್ಲಿ ತೊಡಗಿ ಅಪರಾಧಿಗಳಾಗುತ್ತಿದ್ದಾರೆ, ಇವರಿಗೆ ಸರಿಯಾದ ಸಂಸ್ಕಾರ ನೀಡಿ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ದೇವದುರ್ಗ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧಿಶರಾದ ಸುರೇಶ ಅಪ್ಪಣ್ಣ ಸವದಿ ಕರೆ ನೀಡಿದರು.
ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಪೂರಕ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಗ್ರಾಮಾಭಿವೃದ್ಧಿ ಮೂಲಕ ಕಡಿಮೆ ಬಡ್ಡಿದರದಲ್ಲಿ ಪ್ರಗತಿನಿಧಿ ಸೌಲಭ್ಯ: ಜೆ ಚಂದ್ರಶೇಖರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕರಾದ ಜೆ.ಚಂದ್ರೇಶೇಖರ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗಡೆಯವರು ಕಳೆದ 42 ವರ್ಷಗಳಿಂದ ಲೋಕ ಕಲ್ಯಾಣಕ್ಕಾಗಿ ಸೇವಾ ಚಟುವಟಿಕೆಯೊಂದಿಗೆ ಕೃಷಿ ಪೂರಕ ಹಾಗೂ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ 1982ರಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಪರಿಕಲ್ಪನೆಯೊಂದಿಗೆ ಹುಟ್ಟು ಹಾಕಿ ಇಂದು ರಾಜ್ಯದಲ್ಲಿ ಸುಮಾರು 6,52,698 ಸಂಘಗಳು ರಚನೆಯಾಗಿದ್ದು, 54,61,081 ಫಲಾನುಭವಿಗಳನ್ನು ಹೊಂದಿದೆ, ರಾಯಚೂರು ಜಿಲ್ಲೆಯಲ್ಲಿ 2013 ರಿಂದ ಕಾರ್ಯಚಟುವಟಿಕೆ ಮಾಡುತ್ತಿದ್ದು, ದೇವದುರ್ಗ ತಾಲೂಕಿನಲ್ಲಿ 2752 ಸ್ವಸಹಾಯ ಸಂಘಗಳಿದ್ದು, 21,525 ಸದಸ್ಯರು ಭಾಗಿಯಾಗಿದ್ದು ಸಂಸ್ಥೆಯ ನೆರವನ್ನು ಪಡೆದಿದ್ದಾರೆಂದರು.
ಧರ್ಮಸ್ಥಳ ಸಂಸ್ಥೆಯನ್ನು ವಿರೇಂದ್ರ ಹೆಗಡೆಯವರು ಸ್ವಾರ್ಥಕ್ಕಾಗಿ ಹುಟ್ಟಿ ಹಾಕಿಲ್ಲ ಬದಲಾಗಿ ನೊಂದವರ ಕಣ್ಣಿರು ಒರೆಸುವದಕ್ಕಾಗಿ, ನಿರ್ಗತಿಕರಿಗೆ ನೆಲೆ ಕಲ್ಪಿಸವುದಕ್ಕಾಗಿ, ರೈತರ ಪ್ರಗತಿಗೆ, ಜನರ ಆರೋಗ್ಯಕ್ಕಾಗಿ, ಮಕ್ಕಳ ಶಿಕ್ಷಣಕ್ಕಾಗಿ, ಕೆರೆಗಳ ಮರುನಿರ್ಮಾಣ , ದೇವಸ್ಥಾನಗಳ ಜೀರ್ಣೋದ್ದಾರದಂತಹ ಅನೇಕ ಯೋಜನೆಗಳನ್ನು ರೂಪಿಸಿ ಸಮಾಜ ಮುಖಿ ಕೆಲಸ ಮಾಡುತ್ತಿದ್ದು ಹೆಗ್ಗಡೆಯವರ ಸೇವೆ ಅವಿಸ್ಮರಣೀಯವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ರಾಯಚೂರು ಜಿಲ್ಲೆಯಲ್ಲಿ ಐಡಿಬಿಐ ಬ್ಯಾಂಕ್ ನ ವ್ಯವಹಾರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರಿಗೆ ಅತೀ ಕಡಿಮೆ 58ಪೈಸೆ ಬಡ್ಡಿ ದರದಲ್ಲಿ ಪ್ರಗತಿನಿಧಿ ಸೌಲಭ್ಯವನ್ನು ನೀಡುವುದರ ಜೊತೆಗೆ ಉಳಿತಾಯ ಮಾಡುವ ಮನೋಭಾವನೆಯನ್ನು ಸ್ವಸಹಾಯ ಸಂಘಗಳ ಸದಸ್ಯರಿಗೆ ಅರಿವು ಮೂಡಿಸಿದೆ ಎಂದರು.
ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಜೊತೆಗೆ ಬದುಕಿನ ಕನಸ್ಸು ಕಾಣಲು ಸ್ವಸಹಾಯ ಸಂಘಗಳು ಸಹಕಾರಿಯಾಗಿದೆ: ನ್ಯಾಯಾಧೀಶರಾದ ರಫೀಕ್ ಅಹ್ಮದ್
ಅಭಿಮತ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿವಿಲ್ ನ್ಯಾಯಾಧೀಶರಾದ ರಫೀಕ್ ಅಹ್ಮದ್ ಮಹಿಳಾ ಕಾನೂನು ಕುರಿತು ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರನ್ನು ಆರ್ಥಿಕ ಸ್ವಾವಲಂಬನೆ ಮಾಡುವುದರ ಜೊತೆಗೆ ಮುಂದಿನ ಬದುಕಿನಲ್ಲಿ ಏನು ಸಾಧನೆ ಮಾಡಬೇಕು ಎಂಬ ಕನಸ್ಸು ಕಾಣಲು ಸ್ವಸಹಾಯ ಸಂಘಗಳು ಸಹಕಾರಿಯಾಗಿದೆ. ಮಹಿಳೆಯರಿಗೆ ಕಾನೂನಿನ ಅಡಿಯಲ್ಲಿ ವಿಶೇಷವಾಗಿ ಅವಕಾಶಗಳಿದ್ದು ಇದರ ಬಗ್ಗೆ ಅರಿವು ಪಡೆಯಲು ಮುಂದೆ ಬರಬೇಕಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯು ಬಡವರ ಪಾಲಿನ ಕಲ್ಪವೃಕ್ಷ : ಬಸವರಾಜ ಮಡಿವಾಳ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಜಾನಪದ ಪರಿಷತ್ತ ಅಧ್ಯಕ್ಷರಾದ ಬಸವರಾಜ ಮಡಿವಾಳ ಮಾತನಾಡಿ ತಾಲೂಕಿನಲ್ಲಿ ಧರ್ಮಸ್ಥಳ ಸಂಸ್ಥೆ ಮಹಿಳಾ ಆರ್ಥಿಕಾಭಿವೃದ್ಧಿ ಜೊತೆಗೆ ಜಾಗೃತಿ ಮೂಡಿಸುವದಲ್ಲದೇ ಮದ್ಯ ವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಕುಟುಂಬಗಳ ಸರ್ವೋತಮುಖ ಅಭಿವೃದ್ಧಿ ಶ್ರಮಿಸುತ್ತಿದ್ದು ಗ್ರಾಮಾಭಿವೃದ್ಧಿ ಯೋಜನೆಯು ಬಡವರ ಪಾಲಿನ ಕಲ್ಪವೃಕ್ಷ ವಾಗಿದೆ. ಕಷ್ಟಕಾಲದಲ್ಲಿ ಒಡ ಹುಟ್ಟಿದವರು ಕೈ ಹಿಡಿದು ಮುನ್ನಡೆಸದೇ ಇರುವಂತಹ ಇತ್ತಿಚಿನ ಸಂದರ್ಭದಲ್ಲೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಇಂತಹ ಸಂಸ್ಥೆ ರಾಜ್ಯ ಮಾತ್ರವಲ್ಲ ರಾಷ್ಟ್ರದಾದ್ಯಂತ ಇಂತಹ ಇನ್ನೊಂದು ಸಂಸ್ಥೆ ಇರಲು ಸಾಧ್ಯವಿಲ್ಲ ಯೋಜನೆಯ ಫಲಾನುಭವಿಗಳು ಇವೆಲ್ಲವನ್ನೂ ಅರಿತು ಮುನ್ನಡೆದರೆ ತಮ್ಮ ಕುಟುಂಬದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಶುಭಹಾರೈಸಿದರು.
ಧರ್ಮಸ್ಥಳ ಸಂಘದ ಮೂಲಕ ಮಹಿಳೆಯರು ಆರ್ಥಿಕ ಶಕ್ತಿಯನ್ನು ಪಡೆದು ಸ್ವಾವಲಂಬಿಗಳಾಗಿ ಬದುಕಿ : ಬಸನಗೌಡ ದೇಸಾಯಿ
ಮಹಿಳೆಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುವ ಸ್ವಸಹಾಯ ಸಂಘದ ಮೂಲಕ ಐಡಿಬಿಐ ಬ್ಯಾಂಕಿನಿಂದ ಸಾಲ ಪಡೆದು ಮತ್ತೆ ಸಂಘದ ಮೂಲಕ ಮರುಪಾವತಿ ಮಾಡಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ತೀರಿಸಿಕೊಂಡು ಸ್ವಾವಲಂಬಿಗಳಾಗಿ, ಆರ್ಥಿಕ ಶಕ್ತಿಯನ್ನು ಹೊಂದಿ ಜೀವನದಲ್ಲಿ ಮುಂದೆ ಬರಬೇಕು. ಪ್ರತಿ ಮಹಿಳೆಯರು ಸ್ವಉದ್ಯೋಗವನ್ನು ಮಾಡಿ ದುಡಿದು ಸ್ವತಂತ್ರವಾಗಿ ಬದುಕಬೇಕು ಮತ್ತು ತಮ್ಮ ಕುಟುಂಬಕ್ಕೆ ಆರ್ಥಿಕ ಚೈತನ್ಯವನ್ನು ತುಂಬಬೇಕು. ಧರ್ಮಸ್ಥಳ ಸಂಘ ಯಾವುದೇ ಜಾತಿ ಧರ್ಮ ನೋಡದೆ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತಿದೆ, ಮಹಿಳೆಯರು ಪಡೆದ ಸಾಲವನ್ನು ಸರಿಯಾಗಿ ಉಪಯೋಗಿಸಿಕೊಂಡು ಕ್ರಮವತ್ತಾಗಿ ಮರುಪಾವತಿ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಸಬಲೀಕರಣರಾಗಿ ಎಂದರು.
ಕಾರ್ಯಕ್ರಮದಲ್ಲಿ ಐಡಿಬಿಐ ಬ್ಯಾಂಕ್ ನ ವ್ಯವಸ್ಥಾಪಕರಾದ ರಾಜೇಶ್ವರಿ, ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯ್ಕ್ , ಎಂಐಎಸ್ ಯೋಜನಾಧಿಕಾರಿ ತಿಲಕ್ ಉಪಸ್ಥಿತರಿದ್ದು, ತಾಲೂಕು ಯೋಜನಾಧಿಕಾರಿ ರಾಜೇಶ ಎಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇವದುರ್ಗದ ಸುಭದ್ರಮ್ಮ ಅವರಿಗೆ ಮಂಜೂರಾತಿಗೊಂಡ ಮಾಶಾಸನ ಪತ್ರ ವಿತರಿಸಲಾಯಿತು.
ಹುಸೇನಮ್ಮ ಅವರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಆರೋಗ್ಯ ರಕ್ಷಾ ವಿಮಾ ಮೊತ್ತದ ಚೆಕ್ ವಿತರಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ 70ಒಕ್ಕೂಟಗಳ ಪದಾಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಸೇವಾ ಪ್ರತಿನಿಧಿ ಯವರು ಹಾಗೂ CSC ಸೇವಾದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.