ದೇವದುರ್ಗಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ “ಜ್ಞಾನದೀಪ” ಕಾರ್ಯಕ್ರಮದಡಿಯಲ್ಲಿ ದೇವದುರ್ಗಾ ತಾಲೂಕಿನ ಗ್ರಾಮೀಣ ಸರಕಾರಿ ಶಾಲೆಯ ಶಿಕ್ಷಕರ ಸಮಸ್ಯೆ ಸರಿದೂಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ತಾಲುಕಿನ 23 ಸರಕಾರಿ ಶಾಲೆಗೆ ಜ್ಞಾನದೀಪ ಶಿಕ್ಷಕರನ್ನು ನೇಮಕ ಮಾಡಿರುತ್ತಾರೆ.
ಜ್ಞಾನದೀಪ ಶಿಕ್ಷಕರ ಆದೇಶ ಪತ್ರ ವಿತರಣಾ ಕಾರ್ಯಕ್ರಮವನ್ನು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಇಂದಿರಾ ರವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಜ್ಞಾನದೀಪ ಶಿಕ್ಷಕರ ಆಯ್ಕೆಯ ಆದೇಶ ಪತ್ರವನ್ನು ನೀಡಿ ಮಾತನಾಡಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿಯವರು ಮಾಡುತ್ತಿರುವ ಸಮಾಜೋನ್ಮುಖ ಕಾರ್ಯಗಳು ಬಹಳಷ್ಟು ಯಶಸ್ವಿಯಾಗಿದ್ದು ಧಾರ್ಮಿಕ ಶೈಕ್ಷಣಿಕ, ಸಮುದಾಯ, ಆರೋಗ್ಯ,ಆರ್ಥಿಕ, ಮಹಿಳಾಸಬಲೀಕರಣ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಬಡ ಕುಟುಂಬಗಳಿಗೆ ನೆರವಿನ ಆಸರೆ ನೀಡುತ್ತಿದ್ದು ಇದೀಗ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯಾದ್ಯಾಂತ ಜ್ಞಾನದೀಪ ಶಿಕ್ಷಕರ ಒದಗಣೆ ಮಾಡುತ್ತಿದ್ದು ಅದರಲ್ಲೂ ತಾಲೂಕಿಗೆ 23 ಶಿಕ್ಷಕರನ್ನು ನೀಡಿರುವುದು ನಮಗೆಲ್ಲ ಹೆಮ್ಮೆಯ ವಿಚಾರ
ಶಿಕ್ಷಕರು ಶ್ರದ್ಧೆ, ನಿಷ್ಠೆಯಿಂದ ಸೇವೆ ಸಲ್ಲಿಸಬೇಕು, ಮಕ್ಕಳನ್ನು ಒಲಿಸಿ ಕಲಿಸುವ ಕಲೆ ಕರಗತ ಮಾಡಿಕೊಂಡು, ಸಮಯ ಪ್ರಜ್ಞೆ, ಶಿಸ್ತಿನಿಂದ ಮಾದರಿಯಾಗಿ ಮಕ್ಕಳನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿ ರೂಪಿಸಬೇಕು. ಓದುವ ಹವ್ಯಾಸವನ್ನು ರೂಢಿಸಿಕೊಂಡು ಶಿಕ್ಷಕರು ಯಶಸ್ವಿಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ರಾಯಚೂರು ಜಿಲ್ಲೆಯ ನಿರ್ದೇಶಕರಾದ ಸಂತೋಷ್ ಕುಮಾರ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶಾಲೆ-ಕಾಲೇಜ್‌ಗಳಿಗೆ ಬೆಂಚ್, ಡೆಸ್ಕ್ ವಿತರಣೆ, ಪ್ರಾಥಮಿಕ ಶಾಲೆ ಕಟ್ಟಡಗಳಿಗೆ ಸಹಾಯಧನ, ಪ್ರಾಥಮಿಕ ಶಿಕ್ಷಣಕ್ಕೆ ಟ್ಯಾಬ್, ಪ್ರೌಢ ಶಿಕ್ಷಣಕ್ಕೆ ಲ್ಯಾಪ್‌ಟಾಪ್, ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಸಂಜೆ ಮತ್ತು ಬೆಳಗಿನ ಸಮಯ ವಿಶೇಷ ಟ್ಯೂಷನ್ ಕ್ಲಾಸ್ ಮಾಡುವ ಮೂಲಕ ಶಿಕ್ಷಣ ಕ್ರಾಂತಿ ಮಾಡುತಿದ್ದಾರೆ. ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಸ್ವಯಂ ಸೇವಾ ಶಿಕ್ಷಕರು ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡಬೇಕು ರಾಜ್ಯಾದ್ಯಾಂತ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುತ್ತಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸೇವೆ ಎಂದು ಭಾವಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣ ಸಂಯೋಜಕರಾದ ನರಸಯ್ಯ ಪಾಟೀಲ್, ಗ್ರಾಮಾಭಿವೃದ್ಧಿಯೋಜನೆಯ ತಾಲೂಕು ಯೋಜನಾಧಿಕಾರಿ ರಾಜೇಶ.ಎಂ.ಕಾನರ್ಪ, ಆಜೀಂ ಫೌಂಡೇಶನ್ ನ ತರಬೇತುದಾರ ರಮೇಶ್, ಹಾಗೂ ಶಾಲಾ ಶಿಕ್ಷಕರು ಮತ್ತು ಜ್ಞಾನದೀಪ ಶಿಕ್ಷಕರಾಗಿ ಆಯ್ಕೆಯಾದ ಶಿಕ್ಷಕರು ಉಪಸ್ಥಿತರಿದ್ದರು.