
ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಆರೋಗ್ಯ ಭಾರತಿ ಸಕಲೇಶಪುರ ಘಟಕ, ಲಯನ್ಸ್ ಕ್ಲಬ್ ಕೆ.ಹೊಸಕೋಟೆ ವತಿಯಿಂದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆ.ಹೊಸಕೋಟೆ ಶ್ರೀಮತಿ ಶಾರದಾ ರಾಜಶೇಖರ ಫ್ರೌಢ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಡಾ. ನವೀನ್ ಚಂದ್ರ ಶೆಟ್ಟಿಯವರು ಉದ್ಘಾಟಿಸಿ ಮಾತನಾಡುತ್ತಾ ಯುವ ಜನತೆ ಹಾಗೂ ಮಕ್ಕಳನ್ನು ಮಾದಕ ವಸ್ತುಗಳ ಸೇವನೆಯಿಂದ ದೂರವಿಡಬೇಕು. ಅವರ ಶಕ್ತಿಯನ್ನು ದೇಶಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ಮಕ್ಕಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಹದಿಹರೆಯದ ವಯಸ್ಸಿನಲ್ಲಿ ತಮಗರಿವಿಲ್ಲದಂತೆ ಅನ್ಯರ ಸಹವಾಸದಿಂದ ದುಶ್ಚಟಗಳಿಗೆ ಜಾರಿ ತದನಂತರದಲ್ಲಿ ಇದರಿಂದ ಹೊರಬರಲಾಗದೆ ಶೋಚನೀಯ ಸ್ಥಿತಿ ನಿರ್ಮಾಣವಾಗುತ್ತಿದೆ ಆದ್ದರಿಂದ ಯುವ ಸಮುದಾಯವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದು ಇದರೊಂದಿಗೆ ಇನ್ನಷ್ಟು ಕುಟುಂಬಗಳು ಜಾಗೃತಗೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಯುವ ಜನತೆ ಕೈಜೋಡಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕಿದೆ. ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದದ್ದು ಇದನ್ನು ಪೋಲು ಮಾಡಿಕೊಳ್ಳದೆ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು. ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಬದುಕಬೇಕು. ಮಾದಕ ವಸ್ತುಗಳಿಗೆ ದಾಸರಾಗಿ ಉದ್ದಾರ ಆದರವರೂ ಇತಿಹಾಸದಲ್ಲೇ ಇಲ್ಲಾ. ೧೯೮೭ ಡಿಸೆಂಬರ್ ೭ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಜೂನ್ ೨೬ರಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನವನ್ನು ಆಚರಿಸುವುದಾಗಿ ತೀರ್ಮಾನಿಸಲಾಯಿತು. ಇದರ ಮಹತ್ವ ತಿಳಿದು ಜೀವನಮಾಡಿದರೆ ಆಚರಣೆಯ ಮಹತ್ವ ಹೆಚ್ಚಾಗುತ್ತದೆ. ಸ್ವಸ್ಥ ರಾಷ್ಟ್ರ, ಸ್ವಸ್ಥ ಗ್ರಾಮ, ಸ್ವಸ್ಥವಕ್ತಿ,ಸ್ವಸ್ಥ ಪರಿವಾರದ ನಿರ್ಮಾಣಕ್ಕೆ ನಾವೆಲ್ಲರೂ ಪಣತೊಡಬೇಕಾಗಿದೆ ಎಂದು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ್ ಎಂ ಕಾನರ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಹೊಸಕೋಟೆ ಇದರ ಅಧ್ಯಕ್ಷರಾದ ಅಣ್ಣೇಗೌಡ, ಮಾಜಿ ಅಧ್ಯಕ್ಷರುಗಳಾದ, ಕುಮಾರ್, ಸುಧಾಕರ,ಹರೀಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಉಮಾನಾಥ ಸುವರ್ಣ, ಆರೋಗ್ಯ ಭಾರತಿ ಸಕಲೇಶಪುರ ಘಟಕ ಮಾಜಿ ಅಧ್ಯಕ್ಷ ಪುರುಷೋತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದರು. ಶಾಲೆಯ ಮುಖ್ಯ ಶಿಕ್ಷಕರಾದ ಶಿವಕುಮಾರ್ ರವರು ಅಧ್ಯಕ್ಷತೆ ವಹಿಸಿದ್ದರು ವಲಯದ ಮೇಲ್ವಿಚಾರಕರ ಆನಂದ್, ಸೇವಾ ಪ್ರತಿನಿಧಿ ಜಯಂತಿ, ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.