ರಾಯಚೂರು: 2020ರಿಂದ 2023ರ ಅವಧಿಯಲ್ಲಿನ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾಪಂಚಾಯ್ತಿ ಸಿಇಒ ಪಿ. ರಾಹುಲ್ ತುಕಾರಾಂ ಅವರು ದೇವದುರ್ಗ ತಾಲೂಕಿನ 32 ಪಿಡಿಒಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನರೇಗಾ ಯೋಜನೆಯಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚಿನ ಅಧಿಕ ಹಣ ಅಕ್ರಮ ನಡೆದಿರುವುದು ಲೆಕ್ಕ ಪರಿಶೋಧನಾ ಸಮಿತಿಯ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಇನ್ನು ದೇವದುರ್ಗ ಠಾಣೆಯಲ್ಲಿ ಇಬ್ಬರು ಗೆಜೆಟೆಡ್ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ನಾಲ್ಕು ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು.
ದೇವದುರ್ಗ ತಾಲ್ಲೂಕಿನ 33 ಗ್ರಾಮಪಂಚಾಯಿತಿಗಳಲ್ಲಿ ಅನುಷ್ಠಾನಗೊಂಡ ಒಟ್ಟು 5,385 ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದ್ದು ಸುಮಾರು 100 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂದು ಸಾಮಾಜಿಕ ಪರಿಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇನ್ನು 32 ಗ್ರಾಮ ಪಂಚಾಯತಿಗಳ ಕಾಮಗಾರಿಗಳ ಸಾಮಾಗ್ರಿಗಳನ್ನು ಒಂದೇ ಸಂಸ್ಥೆಯಲ್ಲಿ ಖರೀದಿಸಲಾಗಿದೆ. ಒಟ್ಟು 102.32 ಕೋಟಿ ರೂಪಾಯಿಯನ್ನು ಮಾರುತೇಶ್ವರ ಎಂಟರ್ ಪ್ರೈಸಸ್ ಅನ್ನೋ ಒಂದೇ ಸಂಸ್ಥೆಗೆ ಪಾವತಿಸಿರುವುದು ಬೆಳಕಿಗೆ ಬಂದಿತ್ತು.