ಬೆಂಗಳೂರು : ಕೊರೋನಾ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಬಾಕಿ ಇರುವುದು ಮಾತ್ರ ಮೌಲ್ಯಮಾಪನದ ನಂತ್ರ ಫಲಿತಾಂಶ ಪ್ರಕಟಣೆ. ಇದಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ 13-07-2020ರಿಂದ ಆರಂಭಗೊಳಿಸುತ್ತಿರುವುದಾಗಿ ತಿಳಿಸಿದೆ. ಅಲ್ಲದೇ ಮೌಲ್ಯ ಮಾಪನದಲ್ಲಿ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಿನಾಯಿತಿ ನೀಡಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 13-07-2020ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಆರಂಭವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು, ತಮ್ಮ ಶಾಲೆಯಿಂದ ಮೌಲ್ಯಮಾಪನ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ಉಪ ಮುಖ್ಯ ಮೌಲ್ಯಮಾಪಕರು, ಸಹಾಯಕ ಮೌಲ್ಯ ಮಾಪಕರ ನೇಮಕಾತಿ ಆದೇಶ ಪತ್ರಗಳನ್ನು ಆನ್ ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಮೌಲ್ಯ ಮಾಪನ ಆದೇಶಗಳನ್ನು ನೀಡಿರುವ ಮೌಲ್ಯಮಾಪಕರುಗಳಲ್ಲಿ 55 ವರ್ಷ ವಯೋಮಾನ ಮೀರಿರುವ ಶಿಕ್ಷಕರುಗಳಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಿದೆ. ಆದಾಗ್ಯೂ 55 ವರ್ಷ ಮೀರಿದ ಮೌಲ್ಯಮಾಪಕರುಗಳು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲು ಆಪೇಕ್ಷಿಸಿದಲ್ಲಿ ಅವಕಾಶ ನೀಡಲಾಗುವುದು ಎಂಬುದಾಗಿ ತಿಳಿಸಿದೆ. ಈ ಮೂಲಕ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ.