ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ಕಾಡಾನೆಯೊಂದು ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಆಹಾರ ಅರಸಿ ಆನೆಯು ಕಾಡಿನಿಂದ ರಸ್ತೆ ಬದಿಗೆ ಬಂದಿದ್ದು, ರಸ್ತೆ ಬದಿಯಲ್ಲಿ ಹಾದುಹೋಗುವ ವಿದ್ಯುತ್ ತಂತಿ ತಗುಲಿ ಆನೆ ಸಾವಿಗೀಡಾಗಿದೆ
ಮರದ ಕೊಂಬೆಯೊಂದನ್ನು ಎಳೆಯಲು ಪ್ರಯತ್ನಿಸಿದ್ದ ಸಂದರ್ಭದಲ್ಲಿ ಕೊಂಬೆ ತುಂಡಾಗಿ ವಿದ್ಯುತ್ ತಂತಿ ಮೇಲೆ ಬಿದ್ದು, ತಂತಿಯು ಮುರಿದು ಆನೆಗೆ ಸ್ಪರ್ಷಿಸಿರುವ ಸಾಧ್ಯತೆಯಿದೆ.
ಸುಮಾರು ಹನ್ನೆರಡು ವರ್ಷ ಪ್ರಾಯವಿರುವ ಗಂಡಾನೆ ಸಾವನ್ನಪ್ಪಿದ್ದು, ಸ್ಥಳೀಯರು ಇಂದು ಮುಂಜಾನೆ ಆನೆಯನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೋಸ್ಟ್ ಮಾರ್ಟಮ್ ವರದಿ ಬಳಿಕವೇ ಆನೆ ಸಾವಿಗೆ ಸ್ಪಷ್ಟ ಕಾರಣ ತಿಳಿಯ ಬೇಕಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.