ಹೊಸದಿಲ್ಲಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶರಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಸದ ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೋವಿಡ್ ಸೋಂಕು ತಗಲಿತ್ತು. ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದರೂ ಸುರೇಶ್ ಅಂಗಡಿ ಅವರು ವೈದ್ಯರ ಸಲಹೆ ಮೇರೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಸೋಂಕಿನ ಕಾರಣದಿಂದ ಸುರೇಶ್ ಅಂಗಡಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ 65 ವರ್ಷದ ಸಂಸದ ಅಂಗಡಿ ಅವರು ಇಂದು ಸಾಯಂಕಾಲ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೀಗ ಲಭಿಸಿದೆ.
ಸುರೇಶ್ ರವರು ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆ 1955 ಜೂನ್ 1 ಜನಿಸಿದರು. ಅವರಿಗೆ ಮದುವೆಯಾಗಿ 2 ಹೆಣ್ಣು ಮಕ್ಕಳಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು.
4 ಬಾರಿ ಲೋಕಸಭೆ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.
ಸುರೇಶ್ ಅಂಗಡಿ ಅವರು ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿಯನ್ನು ಪಡೆದಿದ್ದರು. ನಂತರ ಅವರು ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.