ಬೆಂಗಳೂರು: ಚನ್ನರಾಯಪಟ್ಟಣ-ಶ್ರವಣಬೆಳಗೊಳ ಮಾರ್ಗದಲ್ಲಿ ರೈಲ್ವೆ ಕೀಮನ್ ಸಮಯಪ್ರಜ್ಞೆಯಿಂದ ರೈಲು ಅಪಘಾತ ತಪ್ಪಿದೆ.
ರೈಲು ಹಳಿಗಳ ಮೇಲೆ ಟಿಪ್ಪರ್ ಬಿದ್ದಿದ್ದನ್ನು ಗಮನಿಸಿದ ರೈಲ್ವೆ ಕೀಮನ್, ಏ.21 ರಂದು ಬೆಳಿಗ್ಗೆ ಸ್ಟೇಷನ್ ಮಾಸ್ಟರ್ ಗೆ ಈ ಮಾಹಿತಿ ನೀಡಿದ್ದಾರೆ. ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ ಟಿಪ್ಪರ್ ನ ಚಾಲಕ ಧರ್ಮ ರಾಜ್, ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಹ್ಯಾಂಡ್ ಬ್ರೇಕ್ ಹಾಕಿ ಹೋಗಿದ್ದ, ತಾನು ವಾಪಸ್ಸಾಗುವ ವೇಳೆಗೆ ಟಿಪ್ಪರ್ ಜಾರಿ ರಸ್ತೆಯಿಂದ ರೈಲು ಹಳಿಗಳ ಮೇಲೆ ಬಿದ್ದಿದೆ. ಬ್ರೇಕ್ ಇದ್ದರೂ ವಾಹನ ಹೇಗೆ ಚಲಿಸಿತು ಎಂಬ ಬಗ್ಗೆ ಚಾಲಕನೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೀಮನ್ ನವೀನ್ ಕುಮಾರ್ ಗಸ್ತು ಕರ್ತವ್ಯದಲ್ಲಿದ್ದಾಗ ಟಿಪ್ಪರ್ ಹಳಿಯ ಮೇಲೆ ಬಿದ್ದಿರುವುದನ್ನು ಗಮನಿಸಿ ಬೆಳಿಗ್ಗೆ 9 ಗಂಟೆ ವೇಳೆಗೆ ಶ್ರವಣಬೆಳಗೊಳ ಸ್ಟೇಷನ್ ಮಾಸ್ಟರ್ ಕೆ.ಜಿ ಚೇತನ್ ಗೆ ಮಾಹಿತಿ ನೀಡಿ ಮಾರ್ಗದ ರೈಲುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಹಳಿಗಳ ಮೇಲೆ ಬಿದ್ದಿದ್ದ ಟಿಪ್ಪರ್ ಶ್ರವಣಬೆಳಗೊಳದ ಇಟ್ಟಿಗೆ ಫ್ಯಾಕ್ಟರಿಗೆ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮರಳನ್ನು ಕೊಂಡೊಯ್ಯುತ್ತಿತ್ತು. “ಕ್ರೇನ್ ಸಹಾಯದಿಂದ ಲಾರಿಯನ್ನು ಹಳಿಗಳಿಂದ ಹೊರತೆಗೆಯಲಾಗಿದ್ದು, ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ರೈಲ್ವೆ ಕೀಮನ್ ನ ಸಮಯಪ್ರಜ್ಞೆಯಿಂದ ರೈಲು ಅಪಘಾತ ತಪ್ಪಿದೆ” ಎಂದು ರೈಲ್ವೆ ಇಲಾಖೆ ಹೇಳಿದೆ. ಟಿಪ್ಪರ್ ಚಾಲಕನನ್ನು ಬಂಧಿಸಲಾಗಿದ್ದು, ಆರ್ ಪಿಎಫ್ ಆತನ ವಿರುದ್ಧ ಪ್ರಕರಣ ದಾಖಲಿಸಿದೆ.