ಕಾಸರಗೋಡು: KSRTC ಎಂಬ ಹೆಸರನ್ನು ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ ಬಳಸುವಂತಿಲ್ಲ. ರಾಜ್ಯ ಸಾರಿಗೆ ಸಂಸ್ಥೆಗೆ ಕೇಂದ್ರ ‘ಟ್ರೇಡ್ ಮಾರ್ಕ್ ರಿಜಿಸ್ಟ್ರಿ’ ಇಂಥ ಶಾಕ್ ನೀಡಿದೆ. 7 ವರ್ಷಗಳ ಕಾನೂನು ಹೋರಾಟದಲ್ಲಿ KSRTC ಎನ್ನುವ ಹೆಸರು ಮತ್ತು ಲಾಂಛನವನ್ನು ತನ್ನ ಕೈ ವಶ ಮಾಡಿಕೊಳ್ಳುವಲ್ಲಿ ಕೇರಳ ಸಾರಿಗೆ ಸಂಸ್ಥೆ ಯಶಸ್ವಿಯಾಗಿದೆ.
ಎರಡು ರಾಜ್ಯಗಳ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಕೆಎಸ್ಸಾರ್ಟಿಸಿ ಎಂಬ ಹೆಸರಿನ ಪ್ರಯೋಗ ವರ್ಷಗಳಿಂದಲೇ ಚಾಲ್ತಿಯಲ್ಲಿತ್ತು. ಆದರೆ ಇದು ಕರ್ನಾಟಕದ್ದು ಮಾತ್ರ ಎಂಬುದಾಗಿ 2014ರಲ್ಲಿ ಕರ್ನಾಟಕ ಸಾರಿಗೆ ಕೇರಳಕ್ಕೆ ನೋಟೀಸ್ ನೀಡಿತ್ತು. ಆದರೆ ಕೇರಳ ಸಾರಿಗೆ ಸಂಸ್ಥೆ ಕೇಂದ್ರ ಸರಕಾರದ ‘ಟ್ರೇಡ್ ಮಾರ್ಕ್ ರಿಜಿಸ್ಟ್ರಿ’ಗೆ ಅರ್ಜಿ ಸಲ್ಲಿಸಿ ಅದು ತನಗೆ ಸೇರಿದ್ದೆಂದು ವಾದಿಸಿತ್ತು.
ಇದನ್ನು ಪುರಸ್ಕರಿಸಿರುವ ಭಾರತ ಸರಕಾರದ ಟ್ರೇಡ್‌ಮಾರ್ಕ್ ನೋಂದಣಿ ಪ್ರಾಧಿಕಾರ, ಸಾರಿಗೆ ಬಸ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಪದನಾಮ ಮತ್ತು ಲಾಂಛನವು ಕೇರಳಕ್ಕೆ ಮಾತ್ರ ಸೀಮಿತವೆಂದು ಆದೇಶಿಸಿದೆ. ಇದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಹೆಸರನ್ನು ಬದಲಿಸಬೇಕಾದ ಸ್ಥಿತಿ ಎದುರಾಗಿದೆ. ಜತೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ಗಳು, ನಿಲ್ದಾಣಗಳು ಹಾಗೂ ಕಚೇರಿಗಳೂ ಸೇರಿದಂತೆ ಇತರೆಡೆ ಬಳಸಿರುವ ಕೆಎಸ್‌ಆರ್‌ಟಿಸಿ ಹೆಸರು, ಲಾಂಛನವನ್ನು ತೆಗೆಯಬೇಕಾಗಿದೆ.
ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್‌ಟಿಡಿ) ರಚನೆಯಾದಾಗ ಬ್ರಿಟಿಷ್ ರಾಜನ ಅವಧಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1965 ರಲ್ಲಿ ರಚಿಸಲಾಯಿತು. ಕರ್ನಾಟಕವು ಕೆಎಸ್‌ಆರ್‌ಟಿಸಿ ಹೆಸರನ್ನು 1973 ರಿಂದ ಬಳಸಲಾರಂಭಿಸಿತು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಟ್ರೇಡ್ ರಿಜಿಸ್ಟ್ರಿ ಕೇರಳದ ಪರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾರಿಗೆ ಇಲಾಖೆ, ರಾಜ್ಯ ಸಾರಿಗೆ ಇಲಾಖೆಗೆ ಇನ್ಮುಂದೆ ಕೆಎಸ್‌ಆರ್‌ಟಿಸಿ ಎಂದು ಬಳಸಬೇಡಿ ಎಂದು ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದೆ.