"ವಾಟ್ಸಾಪ್ ರಾಮಾಯಣ"
ನಾವೆಲ್ಲರೂ ನಮ್ಮ ವಾಟ್ಸಾಪ್ ಗಳಲ್ಲಿ ಕಲೆ ಸಾಹಿತ್ಯ, ಹರಟೆ, ಮನರಂಜನೆ ಹೀಗೆ ಹಲವು ಬಗೆಯ ವೀಡಿಯೊಗಳನ್ನು ನೋಡುತ್ತೇವೆ.
ಹೀಗೆ ನೋಡಿ ಸಂತೋಷಗೊಳ್ಳುವ ಮನಸ್ಸು ಕೆಲವೇ ನಿಮಿಷಗಳಲ್ಲಿ ನಿರಾಸಕ್ತಿ ಹೊಂದುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ.
ಇದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ಏಕಾಗ್ರತೆ ಇಲ್ಲದಿರುವುದು. ಇದರಿಂದ ನೆನಪಿನ ಶಕ್ತಿಯೂ ಕುಂದುವುದು. ಹಾಗಾಗಿ ಕೆಲವೇ ನಿಮಿಷಗಳಲ್ಲಿ ಅಥವಾ ಸೆಕೆಂಡುಗಳಲ್ಲಿ ತಿಳಿಯಬಯಸುವ ವಿಡಿಯೋಗಳು ಅಥವಾ ಮಾಹಿತಿಗಳು ದೊರಕಿದರೆ ಅದೇ ಖುಷಿ.
ಈ ನಿಟ್ಟಿನಲ್ಲಿ ಪ್ರತಿದಿನವೂ ಅದೇ ಕೆಲವು ಸೆಕೆಂಡುಗಳಲ್ಲಿ ರಾಮಾಯಣದ ಘಟನೆಗಳನ್ನು ನೆನಪಿಸಿಕೊಳ್ಳುವ ಚಿಕ್ಕ ಪ್ರಯತ್ನ ಮಾಡುವುದು ಒಳಿತು.
ಹಾಗಾಗಿ ವಾಟ್ಸಾಪ್ ರಾಮಾಯಣ ಎಂಬ ವಿನೂತನ ಪ್ರಯೋಗದೊಂದಿಗೆ ಮತ್ತೆ ಪುನಃ ನಮ್ಮ ಪೌರಾಣಿಕ ಸನ್ನಿವೇಶ / ಕಥೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಜನತೆಗೆ ತಲುಪಿಸುವ ಪ್ರಯತ್ನದಲ್ಲಿ ಶ್ರೀಯುತ ದುರ್ಗಾಪರಮೇಶ್ವರ ಭಟ್ ಪುತ್ತೂರು, ಇವರು ತೊಡಗಿದ್ದಾರೆ.
ಜಾಲತಾಣದಲ್ಲಿ ರಾಮಾಯಣದ ಕುರಿತಾಗಿ ದೊರಕುವ ಸಾಂದರ್ಭಿಕ ಚಿತ್ರಗಳಿಗೆ ತಮ್ಮದೇ ಧ್ವನಿಯಲ್ಲಿ ಕಥೆ ಹೇಳುತ್ತಿದ್ದಾರೆ.
ಲೇಖಕನಾಗಿಯೂ,ಭಾಷಣಕಾರರಾಗಿಯೂ ಹಾಗೆಯೇ ವೃತ್ತಿಯಲ್ಲಿ ಶಿಕ್ಷಕರಾಗಿ ಇವರು ಬೆಂಗಳೂರಿನ ಶುಭಂ ಕರೋತಿ ಮೈತ್ರೇಯೀ ಗುರುಕುಲದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆಗಳು ತೆರೆಯದೇ ಮನೆಯಲ್ಲಿ ಬೇಸತ್ತು ಕುಳಿತಿರುವ ಮಕ್ಕಳ್ನನ್ನು ಉದ್ದೇಶಿಸಿ ಈ ವಿನೂತನ ಪ್ರಯೋಗವನ್ನು ನಡೆಸಲು ಮುಂದಾಗಿದ್ದಾರೆ.