ಬೆಂಗಳೂರು: ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯಕ್ಕೆ ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಇಂದು ತುಮಕೂರು ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ತಿಪಟೂರಿನ ಐಸಿಎಆರ್ ಪ್ರಾಯೋಜಿತ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪುಸ್ತಕ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದಾಗ ದಾಖಲೆಗಳು ಅಸ್ಪಷ್ಟವಾಗಿದ್ದು ಮತ್ತು ಅಧಿಕಾರಿಗಳು ಗೈರು ಹಾಜರಾಗಿದ್ದು ಕಂಡುಬಂದಿತು. ಈ ಬಗ್ಗೆ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ ಕೇಂದ್ರದ ಮುಖ್ಯಸ್ಥರ ಬಗ್ಗೆ ವಿಚಾರಿಸಿದಾಗ ಮುಖ್ಯಸ್ಥರು ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದ ಇವರ ಉತ್ತರ ಅಸಮರ್ಪಕವೆನಿಸಿದಾಗ ಸಚಿವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಹಾಗೂ ನ್ಯಾಷನಲ್ ಸೀಡ್ಸ್ ಪ್ರಾಜೆಕ್ಟ್ ಮುಖ್ಯಸ್ಥರೊಂದಿಗೆ ದೂರವಾಣಿಯಲ್ಲಿ ವಿಚಾರಿಸಿದಾಗ, ವಿಜ್ಞಾನ ಕೇಂದ್ರದ ಮುಖ್ಯಸ್ಥರು ಬರದೇ ಗೈರಾಗಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.
ಈ ಬಗ್ಗೆ ಕೃಷಿ ಸಚಿವರು ಬೆಂಗಳೂರಿನ ಕುಲಪತಿಗಳೊಂದಿಗೆ ಚರ್ಚಿಸಿ ಕೂಡಲೇ ತಪ್ಪಿತಸ್ಥರು ಹಾಗೂ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪದೇಪದೇ ಸಮರ್ಪಕ ಕಾರಣವಿಲ್ಲದೇ ಗೈರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ