ಅಡಿಕೆ ಖರೀದಿಸಿ ಹಣ ನೀಡದೆ ಪಂಗನಾಮ! ಅಡಿಕೆ ಖರೀದಿಸಿದ ವ್ಯಾಪಾರಿ ನಿಗೂಢ ನಾಪತ್ತೆ! ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಅಡಿಕೆ ವ್ಯಾಪಾರಿಯೊಬ್ಬರು ಅಡಿಕೆ ಬೆಳೆಗಾರರಿಂದ ಅಡಿಕೆ ಖರೀದಿಸಿ ಹಣ ನೀಡದೇ ವಂಚನೆ ಮಾಡಿರುವ ಘಟನೆ ಬಂದಾರು ಗ್ರಾಮದ ಪಾಣೆಕಲ್ಲು ಎಂಬಲ್ಲಿ ನಡೆದಿದೆ.

ತಾಲೂಕಿನ ಬಂದಾರು ಗ್ರಾಮದ ಪಾಣೆಕಲ್ಲು ಬಟ್ಲಡ್ಕ ಎಂಟರ್‌ ಪ್ರೈಸಸ್ಸ್‌ನ ಅಡಿಕೆ ವ್ಯಾಪಾರಸ್ಥ ಬಿ ಎಮ್‌ ರಫೀಕ್‌ ರವರೊಂದಿಗೆ ದೂರುದಾರ ಡಾಕಯ್ಯ ಗೌಡ ಕೊಯ್ಯೂರು ಇವರು ಸುಮಾರು 3 ವರ್ಷಗಳಿಂದ ಅಡಿಕೆ ನೀಡುತ್ತಾ ವ್ಯವಹಾರವನ್ನು ಮಾಡುತ್ತಾ ಬಂದಿರುತ್ತಾರೆ.

READ ALSO

ಅಡಿಕೆಗೆ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ದರ ನಿಗದಿಮಾಡುತ್ತಿದ್ದು ಅಗತ್ಯ ಬಂದಾಗ ಆತನಿಂದ ಹಣ ಪಡೆದುಕೊಳ್ಳುತ್ತಿದ್ದರು . 07-05-2020 ರಂದು ಐದು ಲಕ್ಷದ ಇಪ್ಪತ್ತೈದುಸಾವಿರದ ಐನೂರಾ ಎಂಬತ್ತೆಂಟು ರೂಪಾಯಿ ಮೊತ್ತದ ಅಡಿಕೆಯನ್ನು ಬಿ ಎಮ್‌ ರಫೀಕ್‌ ರವರಿಗೆ ಕೊಟ್ಟಿದ್ದು ಆ ಸಮಯ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯನ್ನು ನೀಡಿದ್ದು ಉಳಿದ ಮೂರು ಲಕ್ಷದ ಐದು ಸಾವಿರದ ಐನೂರಾ ಎಂಬತ್ತೆಂಟು ರೂಪಾಯಿಯನ್ನು (3,05,588/-) ಒಂದು ವಾರ ಬಿಟ್ಟು ನೀಡುತ್ತೇನೆಂದು ತಿಳಿಸಿದ್ದು ಅದರಂತೆ ಮೇಲಿನ ವಿಶ್ವಾಸದಿಂದ ಒಪ್ಪಿಕೊಂಡು ಒಂದು ವಾರ ಬಿಟ್ಟು ಹೋದಾಗ ಮತ್ತೆ 10 ದಿನಗಳ ಕಾಲಾವಕಾಶ ಕೇಳಿದ್ದು ಅದರಂತೆ 26-05-2020 ರಂದು ಆತನ ಅಂಗಡಿಗೆ ಹೋದಾಗ ಆತನ ಅಂಗಡಿ ಮುಚ್ಚಿದ್ದು ಆತನಿಗೆ ದೂರವಾಣಿ ಕರೆಮಾಡಿದಾಗ ಕರೆ ಸ್ವೀಕರಿಸದೇ ಇದ್ದುದ್ದರಿಂದ ಆತನ ಮಗನಾದ ರಮೀಜಾ ನಲ್ಲಿ ವಿಚಾರಿಸಿದಾಗ ಆತನು ಕೂಡಾ ಆತನ ತಂದೆ ಎಲ್ಲಿರುತ್ತಾರೆ ಎಂದು ತಿಳಿಸಿದೇ ತಂದೆಯ ಮೋಸಕ್ಕೆ ಸಹಕರಿಸಿರುತ್ತಾನೆ ಎಂಬುದು ತಿಳಿದು ಬಂದಿದೆ.

ತಾಲೂಕಿನ ಬಂದಾರು, ಮೊಗ್ರು, ಕೊಯ್ಯೂರು, ಬೆಳಾಲು ಗ್ರಾಮದ 100ಕ್ಕೂ ಆಧಿಕ ಗ್ರಾಹಕರ ಮನವೊಲಿಸಿ ವಿಶ್ವಾಸದ ನೆಲೆಯಲ್ಲಿ ಮುಂಗಡ ಅಡಕೆ ಖರೀದಿಸಿ ಸುಮಾರು 1.5 ಕೋಟಿ ರೂಪಾಯಿಗಳನ್ನು ಕೊಡಲು ಬಾಕಿ ಇಟ್ಟುಕೊಂಡಿದ್ದ ಅಡಿಕೆ ವ್ಯಾಪಾರಿ ರಫೀಕ್ ಅವರು ಇದೀಗ ಒಂದು ವಾರದಿಂದ ನಾಪತ್ತೆಯಾಗಿದ್ದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಊರಿನಲ್ಲಿ ವಿಚಾರಿಸಿದಾಗ ರಮಾನಂದ ಭಟ್‌, ಗೋವಿಂದ, ದಿನೇಶ್‌ ಕಿಣಾಜೆ, ನಾರಾಯಣ ಮೈಂದಕೋಡಿ, ಪೂವಪ್ಪ ಗೌಡ ಉಮಿಯಾ, ಲಿಂಗಪ್ಪ ಗೌಡ ಕಜೆ, ನಾಣ್ಯಪ್ಪ ಗೌಡ ಡೆಂಬುಗ, ಲಿಂಗಪ್ಪ ಗೌಡ ಉಮಿಯಾ, ಕುಶಾಲಪ್ಪ ಗೌಡ ಬಂದಾರು,ಧನಂಜಯ ಉಗ್ರೋಡಿ ಹಾಗೂ ಇನ್ನು ಕೆಲವರಿಂದ ಕೂಡಾ ಅಡಿಕೆ ಖರೀದಿಸಿ ಹಣ ನೀಡದೇ ಮೋಸ ಮಾಡಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಡಾಕಯ್ಯ ಗೌಡ ಕೊಯ್ಯೂರುರವರು ನೀಡಿದ ದೂರಿನ ಅನ್ವಯ ಅಡಿಕೆ ವ್ಯಾಪಾರಿ ಬಿ.ಎಮ್‌ ರಫೀಕ್‌ ಹಾಗೂ ಆತನ ಮಗನಾದ ರಮೀಜಾ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.