ಬೆಂಗಳೂರು:- ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಜೂನ್ 2020ರ ಮಾಹೆಯಿಂದ ಆಗಸ್ಟ್2020ರ ಮಾಹೆಯವರೆಗೆ ಸುಮಾರು 5,800 ಗ್ರಾಮಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ ರಾಜ್ಯ ಚುನಾವಣಾ ಆಯೋಗವು ಅವಧಿ ಮುಕ್ತಾಯವಾಗುವ ಗ್ರಾಮಪಂಚಾಯಿತಿಗಳಿಗೆ ಅವಧಿ ಮುಕ್ತಾಯ ಪೂರ್ವದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಮತದಾರರ ಪಟ್ಟಿಯನ್ನು ತಯಾರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ದೇಶಾದ್ಯಂತ ಕೋವಿಡ್ 19 ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಮಾಡಿರುವುದರಿಂದ ಮತದಾರರ ಪಟ್ಟಿಯ ತಯಾರಿಕೆ ಪ್ರಕ್ರಿಯೆಯನ್ನು ಹಾಗೂ ಇತರೆ ಚುನಾವಣಾ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ವಾಸ್ತವ ಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ನೀಡುವ ವರದಿಗಳನ್ನು ಪರಿಶೀಲಿಸಲಾಗಿದ್ದು ಕೋವಿಡ್ 19 ನಿಯಂತ್ರಣ ಕಾರ್ಯದಲ್ಲಿ ಸಂಪೂರ್ಣ ಜಿಲ್ಲಾಡಳಿತವು ತೊಡಗಿರುವುದರಿಂದ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಗಳ ಕೊರತೆ ಸಾರಿಗೆ ವ್ಯವಸ್ಥೆ ಕೊರತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೊಂದರೆ ಯಾಗಿರುವುದು ಕಂಡುಬರುತ್ತದೆ. ರಾಜ್ಯ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಪ್ರಸ್ತುತ ಪರಿಸ್ಥಿತಿಯನ್ನು ಅಸಾಧಾರಣ ಪರಿಸ್ಥಿತಿ ಎಂದು ಪರಿಗಣಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ಅನಿವಾರ್ಯತೆಯಿಂದ ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.