ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಹೆಸರುಗಳನ್ನು ತಿರಸ್ಕರಿಸಿ ಇಬ್ಬರು ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ರಾಜ್ಯಸಭಾ ಚುನಾವಣೆಗೆ ಬಿಜೆಪಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಆದ್ಯತೆ ನೀಡಿದೆ.
ರಾಜ್ಯಸಭಾ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ಕಂಡುಬಂದಿತ್ತು. ಸಹೋದರ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡಬೇಕೆಂದು ಶಾಸಕ ಉಮೇಶ್ ಕತ್ತಿಯವರು ಪಕ್ಷದ ನಾಯಕರ ಮೇಲೆ ಒತ್ತಡ ಹಾಕಿದ್ದರು. ಹಾಲಿ ರಾಜ್ಯಸಭಾ ಸಂಸದ ಪ್ರಭಾಕರ ಕೋರೆಯವರು ಕೂಡಾ ಪುನಾರಯ್ಕೆ ಬಯಸಿ ಟಿಕೆಟ್ ಆಕಾಂಕ್ಷೆ ಹೊಂದಿದ್ದರು.
ಕರಾವಳಿ ಕರ್ನಾಟಕದ ಹೋಟೆಲ್ ಉದ್ಯಮಿ ಕೆ ಪ್ರಕಾಶ್ ಶೆಟ್ಟಿಯವರ ಹೆಸರು ಕೂಡಾ ಕೊನೆಯ ಕ್ಷಣದಲ್ಲಿ ಕೇಳಿ ಬಂದಿತ್ತು. ಇವರೊಂದಿಗೆ ನಿರ್ಮಲ್ ಕುಮಾರ್ ಸುರಾನ ಹಾಗೂ ಡಾ.ಎಂ. ನಾಗರಾಜ್ ಹೆಸರನ್ನು ರಾಜ್ಯ ಬಿಜೆಪಿ ಶಿಫಾರಸು ಮಾಡಲಾಗಿತ್ತು.
ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದವರು.. ಈ ಹಿಂದೆ ಬಿಜೆಪಿ ಬೆಳಗಾವಿ ಗ್ರಾಮೀಣ ಬಿಜೆಪಿ ಅಧ್ಯಕ್ಷ, ಬೆಳಗಾವಿ ಜಿಪಂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ರಾಯಚೂರು ಜಿಲ್ಲೆಯ ಅಶೋಕ್ ಗಸ್ತಿ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದ ಇವರು, ಸದ್ಯ ಬಳ್ಳಾರಿ ವಿಭಾಗದ ಪ್ರಭಾರಿಯಾಗಿದ್ದಾರೆ.
ಸದ್ಯ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿಯಿಂದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರು, ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆಯವರು, ಜೆಡಿಎಸ್ ನಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಎಚ್ ಡಿ ದೇವೇಗೌಡ ಅವರು ಕಣದಲ್ಲಿದ್ದಾರೆ. ಜೂನ್ 19ರಂದು ಚುನಾವಣೆ ನಡೆಯಲಿದ್ದು, ಇವರೆಲ್ಲರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.