ಬೆಳ್ತಂಗಡಿ: ಆಧುನಿಕತೆಯ ಆಡಂಬರವಿಲ್ಲ… ಮೊಬೈಲ್ ನೆಟ್ವರ್ಕ್ ಇಲ್ಲ… ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳಿಲ್ಲ. ಆದರೆ ಎದೆಯಾಳದಲ್ಲಿ ಅಖಂಡ ದೇಶಪ್ರೇಮವಿದೆ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದುರ್ಗಮ ಮಲೆನಾಡಿನ ಕಾನನದ ನಡುವೆ ಇರುವ ಪುಟ್ಟ ಹಳ್ಳಿ ಬಾಂಜಾರುಮಲೆ. ಮತದಾನದಲ್ಲಿ ಶೇ.100ರಷ್ಟು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿರುವ ಈ ಗ್ರಾಮ, 2026ರ 80ನೇ ಸ್ವಾತಂತ್ರ್ಯೋತ್ಸವವನ್ನೂ ಅದೇ ಶ್ರದ್ಧೆ, ಶಿಸ್ತು ಮತ್ತು ಸಂಭ್ರಮದಿಂದ ಆಚರಿಸಿ ದೇಶಭಕ್ತಿಗೆ ಮಾದರಿಯಾಗಿದೆ.
49 ಕುಟುಂಬಗಳ ಈ ಪುಟ್ಟ ಗ್ರಾಮದ ಮಕ್ಕಳು, ಮಹಿಳೆಯರು, ಪುರುಷರು ಹಾಗೂ ವೃದ್ಧರು ಒಂದಾಗಿ ಸೇರಿ ತ್ರಿವರ್ಣ ಧ್ವಜದ ನೆರಳಿನಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದೃಶ್ಯ ಮನಮುಟ್ಟುವಂತಿತ್ತು.
ತ್ರಿವರ್ಣ ಧ್ವಜದ ನೆರಳಲ್ಲೇ ಅಪೂರ್ವ ದಿನ
ಬಾಂಜಾರುಮಲೆಯ ಸ್ವಾತಂತ್ರ್ಯೋತ್ಸವಕ್ಕೆ ತನ್ನದೇ ಆದ ವಿಶಿಷ್ಟ ಸಂಪ್ರದಾಯವಿದೆ. ಆಗಸ್ಟ್ 15ರ ಬೆಳಿಗ್ಗೆ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರಿ ಶ್ರದ್ಧೆಯಿಂದ ಧ್ವಜಾರೋಹಣ ನೆರವೇರಿಸುತ್ತಾರೆ. ವಿಶೇಷವೆಂದರೆ, ಬೆಳಿಗ್ಗೆ ಧ್ವಜಾರೋಹಣ ಮಾಡಿದ ಬಳಿಕ ಸಂಜೆ ಸೂರ್ಯಾಸ್ತದ ವೇಳೆಯಲ್ಲಿ ನಿಯಮಾನುಸಾರ ಧ್ವಜಾವತರಣ ನೆರವೇರುವವರೆಗೂ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳುವುದಿಲ್ಲ. ಇಡೀ ದಿನ ರಾಷ್ಟ್ರಧ್ವಜದ ಅಡಿಯಲ್ಲೇ ಮಕ್ಕಳು ಮತ್ತು ಹಿರಿಯರಿಗಾಗಿ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸಂಜೆ ಗೌರವಪೂರ್ವಕವಾಗಿ ಧ್ವಜಾವತರಣ ನೆರವೇರಿದ ಬಳಿಕವೇ ಎಲ್ಲರೂ ಒಟ್ಟಾಗಿ ತಮ್ಮ ಮನೆಗಳತ್ತ ತೆರಳುತ್ತಾರೆ. ಇಂದಿನ ಆಧುನಿಕ ಕಾಲದಲ್ಲಿ ಇಂತಹ ಶಿಸ್ತುಬದ್ಧ ದೇಶಭಕ್ತಿ ನಿಜಕ್ಕೂ ಅಪರೂಪ.
49 ಮನೆಗಳಿಗೂ ತಿರಂಗ, ಸಿಹಿ ಹಾಗೂ ಭಗವದ್ಗೀತೆ:
ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು ‘ಘುಮಂತು ಕಾರ್ಯ’ ತಂಡದ ಸೇವಾ ಕಾರ್ಯ ದುರ್ಗಮ ಹಾದಿಯನ್ನು ಸವೆಸಿ ಬಾಂಜಾರುಮಲೆಗೆ ತಲುಪಿದ ಕಾರ್ಯಕರ್ತರು ಗ್ರಾಮದ ಎಲ್ಲಾ 49 ಮನೆಗಳಿಗೂ ತಿರಂಗ ಧ್ವಜ ಮತ್ತು ಸಿಹಿತಿಂಡಿಗಳನ್ನು ವಿತರಿಸಿದರು. ಇದರೊಂದಿಗೆ ಪ್ರತಿಯೊಂದು ಕುಟುಂಬಕ್ಕೂ ಪವಿತ್ರ ಭಗವದ್ಗೀತೆ ಗ್ರಂಥ ನೀಡಿ, ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ದೇಶಭಕ್ತಿ, ಸಂಸ್ಕೃತಿ ಮತ್ತು ಸೇವಾಭಾವವನ್ನು ಒಂದೇ ವೇದಿಕೆಯಲ್ಲಿ ಪ್ರತಿಬಿಂಬಿಸಿದ ಈ ಕಾರ್ಯ ಗ್ರಾಮಸ್ಥರ ಮನ ಗೆದ್ದಿತು.
ಸ್ಥಳೀಯರ ಸಹಕಾರ:
ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ಥಳೀಯರಾದ ನವೀನ್ ಬಾಂಜಾರುಮಲೆ, ಹಿರಿಯರಾದ ಗಣೇಶ ಬಾಂಜಾರುಮಲೆ, ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿ ಹಾಗೂ ನಾಗೇಶ್ ಬಾಂಜಾರುಮಲೆ ಅವರ ಶ್ರಮ, ಕಾಳಜಿ ಮತ್ತು ಸಕ್ರಿಯ ಸಹಕಾರ ಪ್ರಮುಖವಾಗಿತ್ತು.
ಗಣ್ಯರ ಉಪಸ್ಥಿತಿ:
ದೇಶಭಕ್ತಿಯ ಈ ಅಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಗಲು ಮಂಗಳೂರು ವಿಭಾಗ ಘುಮಂತು ಕಾರ್ಯ ಸಂಯೋಜಕ ಸುದರ್ಶನ್ ಕನ್ಯಾಡಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ದಿನೇಶ್ ಚಾರ್ಮಾಡಿ, ಧಾರ್ಮಿಕ ಮುಖಂಡರಾದ ಡಿ. ಕಿರಣ್ ಚಂದ್ರ ಪುಷ್ಪಗಿರಿ, ಶಿವಪ್ರಸಾದ್ ಸುರ್ಯ, ರಮೇಶ್ ಸೂರ್ಯ, ಬಾಲಚಂದ್ರ ನೀರಚಿಲುಮೆ, ಬಜರಂಗದಳದ ಕಾರ್ಯಕರ್ತ ಗೌರವ್ ಶೆಟ್ಟಿ ಉಜಿರೆ, ಬಿಜೆಪಿಯ ಪ್ರದೀಪ್ ನಾವೂರು, ಸುಧಾಕರ್ ಶೆಟ್ಟಿಗಾರ್, ಚಂದನ್ ಉಜಿರೆ, ಪ್ರಮೋದ್ ಡಿಡುಪೆ ಹಾಗೂ ಕರುಣಾಕರ್ ಮಾಚಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಗ್ರಾಮಸ್ಥರೊಂದಿಗೆ ಬೆರೆತು ಇಡೀ ದಿನವನ್ನು ಅವರೊಂದಿಗೆ ಕಳೆಯುವ ಮೂಲಕ ಗಣ್ಯರು ಬಾಂಜಾರುಮಲೆಯ ದೇಶಪ್ರೇಮಕ್ಕೆ ಗೌರವ ಸಲ್ಲಿಸಿದರು.
ಮತದಾನದಲ್ಲೂ ನೂರು… ಸ್ವಾತಂತ್ರ್ಯ ಸಂಭ್ರಮದಲ್ಲೂ ನೂರು!
ಸೌಲಭ್ಯಗಳ ಕೊರತೆಯನ್ನು ನೆಪವಾಗಿಸಿಕೊಂಡು ವ್ಯವಸ್ಥೆಯನ್ನು ದೂಷಿಸುವ ಕಾಲಘಟ್ಟದಲ್ಲಿ, ಬಾಂಜಾರುಮಲೆಯ ಜನರು ತಾಯ್ನಾಡಿನ ಮೇಲಿನ ತಮ್ಮ ನಿಷ್ಠೆಯನ್ನು ಕಾರ್ಯದ ಮೂಲಕ ತೋರಿಸುತ್ತಿದ್ದಾರೆ.ಮತದಾನದಲ್ಲಿ ಶೇ.100 ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲೂ ಶೇ.100 ಉತ್ಸುಕತೆಯಿಂದ ಭಾಗವಹಿಸಿ ದೇಶ ಪ್ರೇಮ ತೋರಿದ್ದಾರೆ.
ದಟ್ಟ ಕಾಡಿನ ನಡುವೆ ನೆಲೆಸಿರುವ ಬಾಂಜಾರುಮಲೆಯ 49 ಕುಟುಂಬಗಳ ಒಗ್ಗಟ್ಟು, ಶಿಸ್ತು ಮತ್ತು ದೇಶಪ್ರೇಮ ಇಡೀ ಸಮಾಜಕ್ಕೆ ದಾರಿದೀಪವಾಗಿದೆ. ಅವರ ಈ ಅಪೂರ್ವ ಆಚರಣೆಗೆ ಗೌರವ ಸಲ್ಲಿಸಿದ ಘುಮಂತು ಕಾರ್ಯ ತಂಡದ ಸೇವೆಯೂ ದೇಶಭಕ್ತಿಯ ಸಂದೇಶವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.





