ಅಹಮ್ಮದಾಬಾದ್: ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಇತಿಹಾಸ ರಚಿಸಿದೆ. ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಪಿ ಗೆದ್ದುಕೊಂಡಿದೆ.
ಗೆಲುವಿಗೆ 130 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ವೃದ್ಧಿಮಾನ್ ಸಾಹ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ಮ್ಯಾಥ್ಯೂ ವೇಡ್ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಆದರೆ ಶುಭಮನ್ ಗಿಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಜೊತೆಯಾಟದಿಂದ ಗುಜರಾತ್ ಟೈಟಾನ್ಸ್ ಚೇತರಿಸಿಕೊಂಡಿತು.
ಹಾರ್ದಿಕ್ ಪಾಂಡ್ಯ 30 ರನ್ ಸಿಡಿಸಿ ಔಟಾದರು. ಆದರೆ ಗಿಲ್ ಹೋರಾಟ ಮುಂದುವರಿಸಿದರು.ಇತ್ತ ಡೇವಿಡ್ ಮಿಲ್ಲರ್ ಕೂಡ ಉತ್ತಮ ಸಾಥ್ ನೀಡಿದರು. ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಿಲ್ ಅಜೇಯ 45 ರನ್ ಸಿಡಿಸಿದೆ, ಮಿಲ್ಲರ್ 19 ಎಸೆತದಲ್ಲಿ 32 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.ರಾಜಸ್ಥಾನ ವಿರುದ್ಧ 7 ವಿಕೆಟ್ ಗೆಲುವು ದಾಖಲಿಸಿದ ಗುಜರಾತ್ ಟೈಟಾನ್ಸ್ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಮೊದಲ ಪ್ರಯತ್ನದಲ್ಲೇ ಐಪಿಎಲ್ ಟ್ರೋಪಿ ಗೆದ್ದ ಸಾಧನೆ ಮಾಡಿದೆ.ಇನ್ನು ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದು ಟ್ರೋಫಿ ಗೆದ್ದ ಮೂರನೇ ತಂಡ ಗುಜರಾತ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಟ್ರೋಪಿ ಗೆದ್ದ ತಂಡ:
ರಾಜಸ್ಥಾನ ರಾಯಲ್ಸ್, 2008
ಮುಂಬೈ ಇಂಡಿಯನ್ಸ್, 2017, 2019 ಹಾಗೂ 2020
ಗುಜರಾತ್ ಟೈಟಾನ್ಸ್, 2022
ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಟ್ರೋಫಿ ಗೆದ್ದ 4ನೇ ಭಾರತದ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.