ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನ. 25ರಂದು 75ನೇ ವಸಂತಕ್ಕೆ ಕಾಲಿಡಲಿದ್ದು, ತಮ್ಮ ನಿವಾಸದಲ್ಲಿ ಸರಳವಾಗಿ ಜನ್ಮದಿನಾಚರಣೆ ಆಚರಿಸಿಕೊಳ್ಳಲಿರುವರು.
ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ಡಿ. ರತ್ಮವರ್ಮ ಹೆಗ್ಗಡ ಮತ್ತು ರತ್ನಮ್ಮ ದಂಪತಿಯ ಹಿರಿಯ ಪುತ್ರನಾಗಿ 1948ರ ನ. 25ರಂದು ಜನಿಸಿದ ವೀರೇಂದ್ರ ಕುಮಾರ್ ಅವರು ಡಿ. ವೀರೇಂದ್ರ ಹೆಗ್ಗಡೆಯಾಗಿ 1964ರ ಅ. 24ರಂದು ಧರ್ಮಸ್ಥಳದ 21 ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾಗಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಉದ್ಯೋಗ ತರಬೇತಿ ಕೇಂದ್ರಗಳು, SDM ಶಿಕ್ಷಣ ಸಂಸ್ಥೆಗಳು, ವೃತ್ತಿಶಿಕ್ಷಣ ಸಂಸ್ಥೆಗಳು, ಉಜಿರೆ ಮಂಗಳೂರು, ಮೈಸೂರು, ಧಾರವಾಡ, ಬೆಂಗಳೂರು, ಹಾಸನ, ಉಡುಪಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಕ್ರೀಡೆ, ಸಾಂಸ್ಕೃತಿಕ ರಂಗ, ಪರೀಕ್ಷಾ ಫಲಿತಾಂಶದಲ್ಲಿ ರಾಷ್ಟ್ರಮಟ್ಟದಲ್ಲೇ ವಿಶೇಷ ಮನ್ನಣೆ ಮತ್ತು ಗೌರವಕ್ಕೆ ಪಾತ್ರವಾಗುವಂತೆ ಶೈಕ್ಷಣಿಕ ಕ್ಷೇತ್ರವನ್ನು ಬೆಳೆಸಿದ ಹೆಗ್ಗಳಿಕೆ ಅವರದು. ಪ್ರಸ್ತುತ ವರ್ಷದಲ್ಲಿ ಹೆಗ್ಗಡೆಯವರ ಕಾರ್ಯಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರವು ರಾಜ್ಯ ಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಸಂತಸ ತಂದಿದೆ.
ದೇವಸ್ಥಾನದ ನೌಕರರು, ಊರಿನ ನಾಗರಿಕರು, ಶಿಕ್ಷಣ ಸೇರಿದಂತೆ ವಿವಿಧ ಸಂಸ್ಥೆಗಳ ಸಿಬಂದಿ, ಶ್ರದ್ಧಾ ಭಕ್ತಿಯಿಂದ ಡಾ| ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಸಲ್ಲಿಸಲಿದ್ದಾರೆ.