ಈ ಬಾರಿಯ ಚಿನ್ನದ ಅಂಬಾರಿ ಅಭಿಮನ್ಯು ಹೆಗಲಿಗೆ

ಮೈಸೂರು:  ಕೊರೊನಾದಿಂದಾಗಿ ಈ ಬಾರಿ ಮೈಸೂರು ದಸರಾದಲ್ಲಿ ಯಾವುದೇ ಸಂಭ್ರಮ ಸಡಗರವಿಲ್ಲ. ಅತ್ಯಂತ ಸರಳವಾಗಿ ಈ ಬಾರಿ ದಸರಾವನ್ನು ಆಚರಿಸಲಾಗಿದೆ. ಇನ್ನು ಇವತ್ತಿನ ಜಂಬೂ ಸವಾರಿ ಮೆರವಣಿಗೆ ಕೂಡ ಅಷ್ಟೇ ಸರಳವಾಗಿರಲಿದೆ.

ಈ ಬಾರಿಯ ಜಂಬೂ ಸವಾರಿಯ ವಿಶೇಷತೆಯಾಗಿ ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯುಗೆ  21 ವರ್ಷಗಳ ಬಳಿಕ ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಬಂದೊದಗಿದೆ.

ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು ಆನೆಯು ನಂತರ ನೌಫತ್‌ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ ದಸರೆಯಲ್ಲಿ ಮರದ ಅಂಬಾರಿಯನ್ನು 7-8 ವರ್ಷ ಹೊತ್ತಿರುವ ಅನುಭವ ಅಭಿಮನ್ಯುವಿಗಿದೆ. ಆದರೆ ಇದೇ ಮೊದಲ ಬಾರಿಗೆ ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ. 54 ವರ್ಷದ ಅಭಿಮನ್ಯುವನ್ನು ಮಾವುತ ವಸಂತ ಮುನ್ನಡೆಸಲಿದ್ದಾರೆ.

READ ALSO

ಕೊರೋನಾ ಮಹಾಮಾರಿ ಕಾರಣ ಈ ಬಾರಿ 5 ಆನೆಗಳನ್ನು ಮಾತ್ರ ಕಾಡಿನಿಂದ ನಾಡಿಗೆ ಕರೆ ತರಲಾಗಿದೆ. ಮೈಸೂರು ಅರಮನೆ ಆವರಣದಲ್ಲೇ ಎಲ್ಲಾ ರೀತಿಯ ತಾಲೀಮು ನಡೆಸಿ ಅಂತಿಮ ಜಂಬೂ ಸವಾರಿಗೆ ಸಿದ್ಧವಾಗಿದೆ. ಇನ್ನು ಅಭಿಮನ್ಯು ಅಂಬಾರಿ ಹೊತ್ತರೆ, ಅಕ್ಕಪಕ್ಕದಲ್ಲಿ ವಿಜಯ, ಕಾವೇರ ಕುಮ್ಕಿ ಆನೆಗಳಾಗಿ ಸಾಗಲಿವೆ. ನೌಫತ್ ಆನೆಗಳಾಗಿ ವಿಕ್ರಂ, ನಿಶಾನೆ ಆನೆಯಾಗಿ ಸಾಗಲಿದೆ.