ವಾಷಿಂಗ್ಟನ್ : ಸಂಸತ್ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಭವನಕ್ಕೆ ದಾಳಿ ನಡೆಸಿದ್ದು, ಸಂಘರ್ಷ ಏರ್ಪಟ್ಟಿದೆ.
ಸಂಸತ್ ನಲ್ಲಿ ಎಲೆಕ್ಟೋರಲ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟೋಲ್ ಕಟ್ಟಡಕ್ಕೆ ನುಗ್ಗಿದ ನೂರಾರು ಪ್ರತಿಭಟನಾಕಾರರು ಧಾಂದಲೆ ನಡೆಸಿದರು. ತಡೆಯಲು ಮುಂದಾದ ಪೊಲೀಸರ ಜೊತೆ ಸಂಘರ್ಷವಾಗಿದ್ದು, ಘಟನೆಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕಾಗಿ ನಗರದಲ್ಲಿ ಕರ್ಫ್ಯೂ ಹೇರಲಾಗಿದೆ. ಭದ್ರತಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಘಟನೆಯನ್ನು ಖಂಡಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್, ಇದು ಅಮೆರಿಕ ಇತಿಹಾಸದ ಅತ್ಯಂತ ‘ಕರಾಳ ಕ್ಷಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಸೋಲನುಭವಿಸಿರುವ ಟ್ರಂಪ್ ತಮ್ಮ ಸೋಲಿಗೆ ಚುನಾವಣಾ ಅಕ್ರಮಗಳು ಕಾರಣವಾಗಿದೆ ಎಂದು ಆರೋಪಿಸಿದ್ದರು. ಇದು ಈ ಸಂಘರ್ಷಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಟ್ರಂಪ್ ಪ್ರಚೋದನಾತ್ಮಕ ಟ್ವೀಟ್ ನಂತರ ಟ್ವಿಟ್ಟರ್ ಸಂಸ್ಥೆ ಡೊನಾಲ್ಡ್ ಟ್ರಂಪ್ ಟ್ವಿಟ್ ಅನ್ನು ಲಾಕ್ ಮಾಡಿದೆ.