ಅಮೃತಮಹಲ್ ಗೋತಳಿ ಅಭಿವೃದ್ಧಿಗೆ ಕ್ರಮ: ಪ್ರಭು ಚೌಹಾಣ್

ಚಿಕ್ಕಮಗಳೂರು: ರಾಜ್ಯದಲ್ಲಿ ಅಮೃತಮಹಲ್ ಗೋತಳಿಗಳ ಸಂವರ್ಧನಾ ಕೇಂದ್ರ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಅದರ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಪ್ರಭು ಚೌಹಾಣ್ ಅವರು ತಿಳಿಸಿದ್ದಾರೆ.

READ ALSO

ಜಿಲ್ಲೆಯ ಅಜ್ಜಂಪುರ ಸಮೀಪದ ಕಾಟನಗೆರೆ ಗ್ರಾಮದ ಸಾವಯವ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಶೀಘ್ರವೇ ಅಮೃತ ಮಹಲ್ ಕಾವಲ್ ಒತ್ತುವರಿ ತೆರವು, ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ತಳಿ ಸಂವರ್ಧನಾ ಕೇಂದ್ರಗಳಲ್ಲಿ ವಾಸ್ತವ್ಯ ಹೂಡುವ ಮೂಲಕವೂ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕೃಷಿ ಕಾರ್ಯಗಳಿಗೆ ಉತ್ತೇಜನ ಸೇರಿದಂತೆ, ಗೋ ಮೂತ್ರ ಮತ್ತು ಸಗಣಿಯಿಂದ ತಯಾರಿಸಬಹುದಾದ ಉತ್ಪನ್ನಗಳ ಬಗೆಗೂ ಮಾಹಿತಿ ಕಲೆ ಹಾಕಲಾಗುತ್ತದೆ. ಪ್ರತಿ ತಾಲೂಕಿಗೆ ಗೋ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಗೋ ಹತ್ಯೆ ನಿಷೇಧ ಕಾನೂನನ್ನು ಸಮರ್ಪಕವಾಗಿ ರಾಜ್ಯದಲ್ಲಿ ಜಾರಿಗೊಳಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.