ಬೆಂಗಳೂರು: ಕರ್ನಾಟಕದಿಂದ ಇತ್ತೀಚೆಗಷ್ಟೇ ಆಯ್ಕೆಯಾಗಿ ರಾಜ್ಯಸಭೆ ಪ್ರವೇಶಿಸಿದ್ದ ಪಕ್ಷದ ನಿಷ್ಠಾವಂತ ನಾಯಕ ಅಶೋಕ್ ಗಸ್ತಿ ನಿಧನರಾಗಿದ್ದಾರೆಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೀಗ ಈ ಸುದ್ದಿ ಹಬ್ಬಿದ ಬೆನ್ನಲ್ಲೇ ಆಸ್ಪತ್ರೆ ಹಾಗೂ ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದ್ದು, ಗಸ್ತಿಯವರು ನಿಧನರಾಗಿಲ್ಲ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಹೌದು ಕೊರೋನಾ ಸೋಂಕಿನಿಂದಾಗಿ ಕಳೆದ ಹದಿನೈದು ದಿನಗಳ ಹಿಂದೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಸ್ತಿಯವರ ನಿಧನದ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೂ ಈ ಸುದ್ದಿ ಹರಿದಾಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಿಂದ ಈ ಸಂಬಂಧ ಟ್ವೀಟ್ ಮಾಡಲಾಗಿದ್ದು, ರಾಜ್ಯ ಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿ ಅವರ ಆರೋಗ್ಯ ಕುರಿತು ಕೆಲವು ವರದಿಗಳು ಪ್ರಸಾರವಾಗುತ್ತಿದೆ.
ಗಸ್ತಿ ನಿಧನದ ಬಗ್ಗೆ ಗಣ್ಯಾತಿಗಣ್ಯರ ಟ್ವೀಟ್!
ಗಸ್ತಿಯವರು ನಿಧನ ಹೊಂದಿದ್ದಾರೆಂಬುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಈ ವದಂತಿ ಭಾರೀ ಆತಂಕ ಸೃಷ್ಟಿ ಮಾಡಿತ್ತು. ಆದರೆ ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಇನ್ನು ಈ ವದಂತಿ ಕುರಿತಾಗಿ ಖುದ್ದು ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಅಶೋಕ್ ಗಸ್ತಿ ಆರೋಗ್ಯ ಗಂಭೀರವಾಗಿದೆ. ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದ್ದು ಗಸ್ತಿ ಚೇತರಿಕೆ ಬಗ್ಗೆ ದೇವರಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಗಸ್ತಿ
ರಾಯಚೂರು ಮೂಲದ ಅಶೋಕ ಗಸ್ತಿಯವರಿಗೆ ಸವಿತ ಸಮಾಜದವರು. ಬಿಎ.ಎಲ್‌ಎಲ್‌ಬಿ ಮುಗಿಸಿದ್ದು, ಮೊದಲಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಗಸ್ತಿ ಅವರು ಬಿಜೆಪಿಗಾಗಿ ಹಗಲಿರುಳು ಶ್ರಮಿಸಿದ್ದರು. ಈ ಹಿನ್ನೆಲೆ ಅವರಿಗೆ ಈ ಬಾರಿ ರಾಜ್ಯಸಭೆ ಸದಸ್ಯರಾಗುವ ಅವಕಾಶ ಲಭಿಸಿತ್ತು.