ಪುಟ್ಟ ಕಂದಮ್ಮ ಮಹಡಿಯಿಂದ ಬಿದ್ದು ಸಾವು

ಮಂಡ್ಯ: ಮನೆ ಮಹಡಿ ಮೇಲೆ ಆಟವಾಡಿಸುತ್ತ  ಮಗಳಿಗೆ ಊಟ ಮಾಡಿಸಿದ ತಾಯಿ ಕೈತೊಳೆದುಕೊಂಡು ಬರುವಷ್ಟರಲ್ಲಿ ಮಗು ಟೆರೇಸ್ ನಿಂದ ಬಿದ್ದು ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ನಗರದ ರಾಜ್ ಕುಮಾರ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಸತೀಶ್ ಹಾಗೂ ಶೃತಿ ದಂಪತಿಯ ಮೂರು ವರ್ಷದ ಕಂದ ಧನುಶ್ರೀ ಸಾವನ್ನಪ್ಪಿದ ದುರ್ದೈವಿ. ಟೆರೇಸ್ ಮೇಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಪೈಕಿ ತಾಯಿ ಶೃತಿ ಎಂದಿನಂತೆ ಮಗಳನ್ನು ಟೆರೇಸ್ ನಲ್ಲಿ ಆಟವಾಡಿಸಿ ಊಟ ಮಾಡಿಸಿದ್ದಾರೆ. ಬಳಿಕ ಊಟದ ತಟ್ಟೆ ಇಟ್ಟು ಕೈತೊಳೆದುಕೊಂಡು ಬರಲು ಒಳಕ್ಕೆ ಹೋಗಿದ್ದಾರೆ.

READ ALSO

ಈ ವೇಳೆ ಟೆರೇಸ್ ನಲ್ಲಿ ಏಕಾಂಗಿಯಾಗಿದ್ದ ಧನುಶ್ರೀ ಕೆಳಕ್ಕೆ ನೋಡಲು ಹೋಗಿದ್ದು, ಆಯತಪ್ಪಿ ಮೂರನೇ ಮಹಡಿಯ ಟೆರೇಸ್ ನಿಂದ ಕೆಳಕ್ಕೆ ಬಿದ್ದಿದ್ದಾಳೆ. ಆಕೆಯ ತಲೆಗೆ ಬಲವಾದ ಏಟು ಬಿದ್ದಿದೆ. ಪೋಷಕರು ತಕ್ಷಣ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಕೊರೋನಾ ಕಾರಣಕ್ಕೆ ಸೂಕ್ತವಾದ ಚಿಕಿತ್ಸೆ ತಕ್ಷಣಕ್ಕೆ ದೊರೆತಿಲ್ಲ. ಫಲವಾಗಿ ಮೂರು ವರ್ಷದ ಕಂದಮ್ಮ ಧನುಶ್ರೀ ಸಾವನ್ನಪ್ಪಿದ್ದಾಳೆ.

ನೋಡಲು ಮುದ್ದಾಗಿದ್ದ ಮೂರು ವರ್ಷದ ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದ್ದು, ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ. ಮಂಡ್ಯ ಪೂರ್ವಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.