ಮಂಗಳೂರು: ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಆರ್ಥಿಕ ನೀತಿ ಸಮಿತಿಯ ಸದಸ್ಯರಾಗಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಹಿರಿಯ ಸಹಕಾರಿ, ಉಜಿರೆ ರಬ್ಬರ್ ಸೊಸೈಟಿ ಸ್ಥಾಪಕಾಧ್ಯಕ್ಷರಾಗಿದ್ದ ಜಿ.ಎನ್.ಬಿಡೆಯವರ ಪುತ್ರ ಡಾ. ಶಶಾಂಕ್ ಬಿಡೆ ಆಯ್ಕೆಯಾಗಿದ್ದಾರೆ.
ಆರ್‌ಬಿಐನ ಮೂವರು ಸದಸ್ಯರ ನೇಮಕವನ್ನು ಕೇಂದ್ರ ಸರ್ಕಾರ ತನ್ನ ಗೆಜೆಟ್ ಅಧಿಸೂಚನೆಯಲ್ಲಿ ಹೊರಡಿಸಿದೆ. ಪ್ರಧಾನಿ ನೇತೃತ್ವದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯ (ಎಸಿಸಿ) ಹೆಸರುಗಳಿಗೆ ಅನುಮೋದನೆ ನೀಡಿದೆ.
ಆರ್‌ಬಿಐ ಕಾಯ್ದೆಯ ಪ್ರಕಾರ, ಈ ಮೂವರು ನೂತನ ಸದಸ್ಯರು ನಾಲ್ಕು ವರ್ಷಗಳ ಕಾಲ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮುಂಡಾಜೆಯಲ್ಲಿ ಜನಿಸಿದ್ದ ಶಶಾಂಕ್ ಭಿಡೆ ಅವರು ಅಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಉಜಿರೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು. ತಮ್ಮ ಶಾಲಾ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಓದಿದ್ದು ಭಿಡೆ ಅವರ ಹೆಗ್ಗಳಿಕೆ.
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪಡೆದರು. ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಎಂಎಸ್ಸಿ ಪಡೆದು, ಅಮೆರಿಕದ ಅಯೋವಾ ಸ್ಟೇಟ್ ಯೂನಿವರ್ಸಿಟಿಯಿಂದ ಕೃಷಿ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪಡೆದಿದ್ದದರು. ಆಸ್ಟ್ರೇಲಿಯಾದ ದಕ್ಷಿಣ ಏಷ್ಯಾ ಸಂಶೋಧನಾ ಕೇಂದ್ರ, ರಾಷ್ಟ್ರೀಯ ವಿಶ್ವವಿದ್ಯಾಲಯ, ಕ್ಯಾನ್‌ಬೆರಾದಲ್ಲಿ ಯೋಜನೆಗೆ ಸಂಬಂಧಿಸಿದ ಹುದ್ದೆಯಲ್ಲಿಯೂ ಕೆಲಸ ಮಾಡಿದ್ದಾರೆ. ಟೋಕಿಯೊದ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನಲ್ಲಿನ ಫೌಂಡೇಷನ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಕೆಲ ಕಾಲ ವಿಸಿಟಿಂಗ್ ಫೆಲೋಶಿಪ್ ಆಗಿದ್ದರು. ಹಲವು ಶೈಕ್ಷಣಿಕ ನಿಯತಕಾಲಿಕಗಳಲ್ಲಿ ತಮ್ಮ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ‘ಎಕನಾಮಿಟ್ರಿಕ್ಸ್ ಮಾಡಲ್ ಫಾರ್ ಇಂಡಿಯಾ’ ಮತ್ತು ‘ಇಂಡಿಯಾ ಸ್ಟೇಟ್ ಎಕನಾಮಿಸ್’ ಪುಸ್ತಕಗಳಿಗೆ ಸಹ ಬರಹಗಾರರಾಗಿದ್ದಾರೆ.
ಭಿಡೆ ಅವರು ಪ್ರಸ್ತುತ ದೆಹಲಿಯ ಎನ್‌ಸಿಎಇಆರ್‌ನಲ್ಲಿ ಹಿರಿಯ ಸಂಶೋಧನಾ ಸಲಹೆಗಾರರಾಗಿದ್ದಾರೆ. ಕೃಷಿ ಅರ್ಥಶಾಸ್ತ್ರಜ್ಞರಾಗಿ ತರಬೇತಿ ಪಡೆದ ಅವರು ಸ್ಥೂಲ ಆರ್ಥಿಕ ಮಾದರಿ, ಮುನ್ಸೂಚನೆ ಮತ್ತು ಬಡತನದ ವಿಶ್ಲೇಷಣೆಯಿಂದ ಹಿಡಿದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೃಷಿಯವರೆಗೆ ವಿವಿಧ ಅನ್ವಯಿಕ ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸಾಕಷ್ಟು ವಿತ್ತೀಯ ಅನುಭವ ಪಡೆದಿದ್ದಾರೆ. ಸಹಜವಾಗಿಯೇ ಕೇಂದ್ರ ಸರ್ಕಾರ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ನ ವಿತ್ತೀಯ ನೀತಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿದೆ.
ಕೆಲ ಕಾಲ ಸಾಮಾಜಿಕ ಲೆಕ್ಕ ಪರಿಶೋಧಕ ಮ್ಯಾಟ್ರಿಕ್ಸ್ ಆಧಾರಿತ ಸಿಜಿಇ ಮಾದರಿಗಳು ಮತ್ತು ಮ್ಯಾಕ್ರೋಕಾನೊಮೆಟ್ರಿಕ್ನಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಎನ್‌ಸಿಎಇಆರ್ ನಡೆಸಿದ ತ್ರೈಮಾಸಿಕ ವ್ಯವಹಾರ ನಿರೀಕ್ಷೆಗಳ ಸಮೀಕ್ಷೆಯನ್ನು ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ನಲ್ಲಿ ಆರ್‌ಬಿಐ ಘಟಕದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡಿದಂತಹ ಅನುಭವ ಅವರಿಗಿದೆ.