ಬೆಂಗಳೂರು: ಕಂಠಿ, ಸಾಹೇಬ ಚಿತ್ರಗಳನ್ನು ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕ ಭರತ್ ಹಠಾತ್ ಅಸುನೀಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಭರತ್ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೊರೊನ ಪೀಡಿತರಾಗಿದ್ದ ಭರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಭರತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
2004 ರಲ್ಲಿ ಕಂಠಿ ಚಿತ್ರದ ಮೂಲಕ ಭರತ್ ಚಿತ್ರರಂಗ ಪ್ರವೇಶಿಸಿದರು. ಶ್ರೀ ಮುರಳಿ ಮತ್ತು ರಮ್ಯ ಅಭಿನಯದ ಈ ಚಿತ್ರ ಹಿಟ್ ಆಗಿತ್ತು. ಇದಾದ ಮೇಲೆ ಹಲವು ವರ್ಷಗಳ ಕಾಲ ಭರತ್ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಮತ್ತೆ 2017 ರಲ್ಲಿ ಮನೋರಂಜನ್ ರವಿಚಂದ್ರನ್ ಹಾಗು ಶಾನ್ವಿ ಶ್ರೀವತ್ಸ ಅಭಿನಯದ ಸಾಹೇಬ ಚಿತ್ರದ ಮೂಲಕ ಭರತ್ ಮತ್ತೆ ನಿರ್ದೇಶನಕ್ಕೆ ಮರಳಿದ್ದರು. ಸಾಹೇಬ ಚಿತ್ರ ಸಾಧಾರಣ ಯಶಸ್ಸು ಕಂಡಿತು. ಜೀವನಾಧಾರಕ್ಕೆ ಸಿನಿಮಾವನ್ನೇ ಭರತ್ ವೃತ್ತಿಯಾಗಿ ಪರಿಗಣಿಸಿದ್ದರು.
ಮೂಲತಃ ರಾಮನಗರದ ಚಿಕ್ಕಮುಳವಾಡಿ ಗ್ರಾಮದವರಾಗಿದ್ದ ಭರತ್ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ವಾಸವಿದ್ದರು. ಅವರು ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿರುವಾಗಲೇ ಇಹಲೋಕ ತ್ಯಜಿಸಿರುವುದು ಖೇದಕರ ಸಂಗತಿಯಾಗಿದೆ.
ಗೀತರಚನೆಕಾರ ಕವಿರಾಜ್ ಗೆಳೆಯ ಹಾಗು ನಿರ್ದೇಶಕ ಭರತ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಕವಿರಾಜ್ ಕಂಠಿ ಚಿತ್ರದ ಜಿನು ಜಿನುಗೋ ಹಾಗು ಬಾನಿಂದ ಬಾ ಚಂದಿರ ಹಾಡುಗಳು ತಮಗೆ ಆರಂಭದ ದಿನಗಳಲ್ಲಿ ಒಂದು ಹೆಸರು ತಂದು ಕೊಟ್ಟಿದ್ದವು. ಅಂಥ ಒಳ್ಳೆಯ ಚಿತ್ರವನ್ನು ಕೊಟ್ಟ ನಿರ್ದೇಶಕ ಇಂದು ತಮ್ಮನ್ನು ಅಗಲಿರುವುದು ದುಃಖಕರ ವಿಷಯ ಎಂದು ಕವಿರಾಜ್ ತಿಳಿಸಿದ್ದಾರೆ.