
ಬೆಳ್ತಂಗಡಿ: ಧರ್ಮಸ್ಥಳದಿಂದ ಆಲಂದಡ್ಕ ಸಂಚರಿಸುತ್ತಿದ್ದ ಸಾರಿಗೆ ಬಸ್ ಮುಂಡಾಜೆ ಸಮೀಪದ ಸೋಮಂತಡ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಸರಿದ ಘಟನೆ ಜ. 28ರ ಮಂಗಳವಾರ ನಡೆದಿದೆ.
ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಮುಂಡಾಜೆ ಮೂಲಕ ಆಲಂದಡ್ಕಕ್ಕೆ ಹೋಗುತ್ತಿದ್ದ ಬಸ್ ಸುಮಾರು 4.30 ಕ್ಕೆ ಅಪಘಾತ ಸಂಭವಿಸಿದೆ.
ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇದ್ದು ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮೋರಿ ಅಳವಡಿಸಲಾಗಿದೆ. ಈ ಸ್ಥಳದಲ್ಲಿ ಬಸ್ ನ ಸ್ಟೇರಿಂಗ್ ಕಟ್ ಅಥವಾ ಬ್ರೇಕ್ ಫೈಲ್ ನಿಂದಾಗಿ ಬಸ್ ಸಮೀಪದ ಮೋರಿಗೆ ತಾಗಿ ನಿಂತಿದೆ.
ಹಲವು ವಿದ್ಯಾರ್ಥಿಗಳಿಗೆ, ಬಸ್ ಪ್ರಯಾಣಿಕರಿಗೆ ಗಾಯವಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿನ ಮುಂಬದಿಯ ಗಾಜು ಒಡೆದು ಇಬ್ಬರು ಮಕ್ಕಳು ಚರಂಡಿಗೆ ಬಿದ್ದಿದ್ದಾರೆ.
ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಹಾಗೂ ಹೆದ್ದಾರಿ ಕಾಮಗಾರಿ ಸಿಬಂದಿ ತುರ್ತು ಸ್ಪಂದನೆ ನೀಡಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.