ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನೀರಚಿಲುಮೆ ಎಂಬಲ್ಲಿ ವೀಲ್ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ಜಗದೀಶ್ ನಾಯ್ಕ್ ಎಂಬವರಿಗೆ ಆಸರೆಯಾದ ಸಿಎ ಬ್ಯಾಂಕ್ ಧರ್ಮಸ್ಥಳ.

ಆಕಸ್ಮಿಕ ಅವಘಡವೊಂದರಲ್ಲಿ ತನ್ನ ಸೊಂಟದ ಕೆಳಗಿನ ಶಕ್ತಿಯನ್ನೇ ಕಳೆದುಕೊಂಡರೂ ಕೂಡಾ ಛಲ ಬಿಡದ ತ್ರಿವಿಕ್ರಮನಂತೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಸಣ್ಣ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡ ಜೀವ ಅದು. ಇವರ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ನಮ್ಮ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಜಗದೀಶ್ ಅವರ ವ್ಯಾಪಾರಕ್ಕೆ ಮಳೆಗಾಳಿಗಳಿಂದ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಅವರನ್ನು ಸಂಪರ್ಕಿಸಿ ಏನಾದರೂ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು.

ಸದಾ ವಿಭಿನ್ನ ಹಾಗೂ ವಿಶಿಷ್ಟ ಯೋಜನೆಗಳ ಮೂಲಕ ಮಾದರಿ ಕಾರ್ಯಕ್ರಮಗಳ ಮೂಲಕ ಜನಾನುರಾಗಿ ಆಗಿರುವ ಪ್ರೀತಮ್ ಅವರು ತಮ್ಮ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ಜೊತೆಗೆ ಚರ್ಚಿಸಿ ಜಗದೀಶ್ ಅವರಿಗೆ ವ್ಯಾಪಾರಕ್ಕೆ ಸುರಕ್ಷಿತವಾದ ವ್ಯವಸ್ಥೆ ಮಾಡಿರುತ್ತಾರೆ. ಇಂದು ಬೆಳ್ತಂಗಡಿ ಶಾಸಕರ ಮೂಲಕ ಉದ್ಘಾಟನೆಗೊಂಡಿದ್ದು ಜಗದೀಶ್ ಅವರ ಮುಖದಲ್ಲಿನ ಮುಗುಳ್ನಗು ಎಲ್ಲವನ್ನೂ ಹೇಳುತಿತ್ತು.
ಸಮಾಜಮುಖಿ ಚಿಂತನೆಗಳಿಂದ ಸಹಕಾರಿ ಸಂಘವೊಂದು ಹೇಗೆ ಜನಮನ್ನಣೆ ಗಳಿಸಬಹುದು ಎಂಬುದಕ್ಕೆ ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಂಘ ಮಾದರಿ ನಿದರ್ಶನವಾಗಿದೆ.






