ಕಾರುಚಾಲಕನ ಎಡವಟ್ಟಿಗೆ ಅಮಾಯಕ ಜೀವಗಳು ಬಲಿ! ಹ್ಯಾಂಡ್ಬ್ರೇಕ್ ಹಾಕದೇ ಇಳಿಜಾರಿನಲ್ಲಿ ನಿಲ್ಲಿಸಿದ ಕಾರು ಕೆರೆಗೆ ಬಿದ್ದು ನಾಲ್ವರ ದುರ್ಮರಣ!

ರಾಜಸ್ಥಾನ : ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಇಳಿಜಾರಿನಲ್ಲಿ ಕಾರು ನಿಲ್ಲಿಸಿ ಚಾಲಕ ಹೋದ ಕಾರಣ, ಕಾರು ಉರುಳಿಬಿದ್ದು ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ರಾಜಸ್ಥಾನದ ಹನುಮನ್‍ಗರ್ ಜಿಲ್ಲೆಯಲ್ಲಿ ನಡೆದಿದೆ.

ಸಿಕಾರ್​ನಿಂದ ರಾವತ್ಸರ್​ಗೆ ದಂಪತಿ ಅವರ ಮಗಳು ಹಾಗೂ ಸಂಬಂಧಿಯೊಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದಿರಾಗಾಂಧಿ ಕಾಲುವೆ ಸಮೀಪ ಚಾಲಕ ರಮೇಶ್​ ಕುಮಾರ್​ ಕಾರನ್ನು ನಿಲ್ಲಿಸಿ ಮೂತ್ರವಿಸರ್ಜನೆಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಆತ ಕಾರಿನ ಹ್ಯಾಂಡ್​ಬ್ರೇಕ್​ ಹಾಕಿರಲಿಲ್ಲ.

READ ALSO

ಇಳಿಜಾರು ಪ್ರದೇಶವಾಗಿದ್ದರಿಂದ ಹ್ಯಾಂಡ್​ಬ್ರೇಕ್​ ಇಲ್ಲದೇ ಕಾರು ಕಾಲುವೆಗೆ ಉರುಳಿಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಮೃತಪಟ್ಟವರನ್ನು ವಿನೋದ್ ಕುಮಾರ್(45), ಪತ್ನಿ ರೇಣು(42) ಹಾಗೂ 15 ವರ್ಷದ ಮಗಳು ಮತ್ತು ಅವರ ಸಂಬಂಧಿಕರಾದ ಸುನೀತ ಭತಿ(40) ಎಂದು ಪೊಲೀಸರು ಗುರುತಿಸಿದ್ದಾರೆ. ಮೀನು ಹಿಡಿಯುವವರ ಸಹಾಯದಿಂದ ಶವಗಳನ್ನು ಕಾಲುವೆಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.