ನವದೆಹಲಿ: ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗೆ ಸಂಕಷ್ಟ ಎದುರಾಗಿದೆ. ಕೇಂದ್ರ ಸರ್ಕಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಪರಿಷ್ಕರಿಸಿರುವ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳನ್ನು ಇದುವರೆಗೂ ಒಪ್ಪದ ಟ್ವಿಟರ್ , ಫೇಸ್‌ಬುಕ್, ಇನ್‌ಸ್ಟಾಗ್ರಾಂ ಭಾರತದಲ್ಲಿ ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿದೆ.
ಭಾರತದಲ್ಲಿ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಕುರಿತು ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ತಂದಿದೆ. ಈ ಪ್ರಕಾರ ಫೆಬ್ರವರಿ 25 ರಂದು ಸಾಮಾಜಿಕ ಮಾಧ್ಯಮ ದಿಗ್ಗಜರಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಿಗೆ ನೊಟೀಸ್ ನೀಡಲಾಗಿದೆ.
ಜೊತೆಗೆ 3 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ನಿಯಮ ಒಪ್ಪಿಕೊಂಡಿಲ್ಲ. ಇದೇ ಧೋರಣೆ ಮುಂದವರಿದರೆ ಮೇ.26ಕ್ಕೆ ಭಾರತದಲ್ಲಿ ಟ್ವಿಟರ್, ಫೇಸ್‌ಬುಕ್ , ಇನ್‌ಸ್ಟಾಗ್ರಾಂ ಬ್ಲಾಕ್ ಆಗಲಿದೆ.
ಸುದ್ದಿ ತಾಣಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ಕೇಂದ್ರ ಫೆಬ್ರವರಿಯಲ್ಲಿ ಜಾರಿಗೆ ತಂದಿದೆ. ಈ ನಿಯಮವನ್ನು ಅನುಸರಿಸಲು ಮೇ. 26ರ ಅಂತಿಮ ಗಡುವನ್ನು ನೀಡಲಾಗಿದೆ. ಇನ್ನೆರಡು ದಿನದಲ್ಲಿ ಈ ನಿಯಮ ಪಾಲಿಸಲು ನಿರಾಕರಿಸಿದರೆ, ಸಾಮಾಜಿಕ ಮಾಧ್ಯಮ ಕಂಪನಿಗಳ ಸೇವೆ ಬ್ಲಾಕ್ ಆಗಲಿದೆ. ಕಾನೂನು ಪ್ರಕಾರ ಕ್ರಿಮಿನಲ್ ಕ್ರಮಕ್ಕೆ ಎದುರಿಬೇಕಾಗಿದೆ.
ಹೊಸ ನಿಯಮದ ಅಡಿಯಲ್ಲಿ, ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಮಾಹಿತಿ ಮತ್ತು ತಂತ್ರಜ್ಞಾನ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಒಳಗೊಂಡಿರುತ್ತದೆ. ಈ ಸಮಿತಿ ಬಯಸಿದರೆ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯ ನಡೆಸಲು ಸು ಮೋಟು ಅಧಿಕಾರ ನೀಡಲಾಗಿದೆ.
ಭಾರತ ಮೂಲದ ಅಧಿಕಾರಿಗಳ ನೇಮಕ, ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಹೊಸ ನಿಯಮ ಹೇಳುತ್ತದೆ.