ಬಾಲಕನಿಗೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ: ಅಪರಾಧಿ‌ ಚಂದ್ರ ಕೆ. ಹೆಮ್ಮಾಡಿಗೆ 10 ವರ್ಷ ಜೈಲು ಶಿಕ್ಷೆ

ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರತ್ಯೇಕ 21 ಪೋಕ್ಸೋ ಪ್ರಕರಣದ ಪೈಕಿ ಮೊದಲ ಪ್ರಕರಣದಲ್ಲಿ ಆರೋಪಿ ಚಂದ್ರ ಕೆ. ಹೆಮ್ಮಾಡಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ.

ಚಂದ್ರ ಕೆ.ಹೆಮ್ಮಾಡಿ ತಾನು ಪತ್ರಿಕಾ ವರದಿಗಾರನೆಂದು ಹೇಳಿಕೊಂಡು ಬೈಂದೂರು ಭಾಗದ ಗ್ರಾಮೀಣ ಪ್ರದೇಶಕ್ಕೆ ತೆರಳಿ ಅಲ್ಲಿನ ಬಾಲಕನೋರ್ವನಿಗೆ ತಾನು ಪ್ರಾಣಿ, ಪಕ್ಷಿ, ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ತನ್ನ ಜೊತೆ ಬರುವಂತೆ ಪುಸಲಾಯಿಸಿ ಕರೆದೊಯ್ದು ಆತನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಬೈಂದೂರು ಠಾಣೆಗೆ ನೀಡಿದ ದೂರಿನಂತೆ 2018 ನವೆಂಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಆರೋಪಿಯನ್ನು ಬಂಧಿಸಲಾಗಿತ್ತು.

READ ALSO

ಇದರ ನಂತರ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದು, ಬಾಲಕರ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬೈಂದೂರು, ಕೊಲ್ಲೂರು ಸಹಿತ ವಿವಿಧ ಠಾಣೆಗಳಲ್ಲಿ 21 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಮೊದಲ ಪ್ರಕರಣದಲ್ಲಿ ಅಂದಿನ ಬೈಂದೂರು ಸಿಪಿಐ ಪರಮೇಶ್ವರ್ ಆರ್. ಗುನಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು 36 ಸಾಕ್ಷಿಗಳಲ್ಲಿ ಸಂತ್ರಸ್ತ ಬಾಲಕನ ಸಹಿತ 15 ಮಂದಿ ಸಾಕ್ಷಿ ನುಡಿದಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶೆ ಯಾದವ್ ವನಮಾಲಾ ಆನಂದರಾವ್, ಆರೋಪಿಗೆ ಮೊದಲ ಪ್ರಕರಣದಲ್ಲಿ 10ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ. ದಂಡದಲ್ಲಿ 5 ಸಾವಿರ ಸರಕಾರಕ್ಕೆ, 5 ಸಾವಿರ ನೊಂದ ಬಾಲಕನಿಗೆ ನೀಡಲು ಆದೇಶ ನೀಡಲಾಗಿದೆ.