ಮಂಗಳೂರು, : ಕೊರೊನಾ ವೈರಸ್, ಚಂಡಮಾರುತದ ಭೀಕರತೆಗೆ ಕರಾವಳಿಯಲ್ಲಿ ಮತ್ಸೋದ್ಯಮ ನಲುಗಿ ಹೋಗಿದೆ. ಮೀನುಗಾರಿಕೆ ಉತ್ತುಂಗವಿದ್ದ ಸಮಯದಲ್ಲಿಯೇ ಲಾಕ್‌ಡೌನ್ ಬರೆ ಬಿದ್ದು, ಸ್ವಲ್ಪ ಸುಧಾರಿಸುವಾಗಲೇ ಚಂಡಮಾರುತ ಹೊಡೆತಕೊಟ್ಟಿತು.ಇದೆಲ್ಲದರ ನಡುವೆ ಇದೀಗ ಮೀನುಗಾರಿಕಾ ಋತು ಅಂತಿಮವಾಗುತ್ತಿದ್ದು, ಜೂನ್ 1 ರಿಂದ ಮೀನುಗಾರಿಕೆಯನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕರ್ನಾಟಕ ಕಡಲ ಮೀನುಗಾರಿಕಾ ನಿಯಂತ್ರಣ ಕಾಯಿದೆಯನುಸಾರವಾಗಿ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತೀಕೃತ ಬೋಟ್ ಅಥವಾ ಯಾವುದೇ ಬೋಟ್‌ಗಳನ್ನು ಸಮುದ್ರಕ್ಕೆ ಇಳಿಸದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಜೂನ್ 1 ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ನಿಷೇಧ ವನ್ನು ಹೇರಲಾಗಿದ್ದು, ರಾಜ್ಯ ಸರ್ಕಾರದ ನಿಯಮ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ, ಕಡಲ ಮೀನುಗಾರಿಕೆ ವಿಧಿಸಲಾಗಿರುವ ದಂಡನೆಗೆ ಹೊಣೆಯಾಗುವುದಲ್ಲದೇ, ಒಂದು ವರ್ಷದ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಮೀನುಗಾರಿಕಾ ಇಲಾಖೆ ಪ್ರಕಟಣೆ ಹೊರಡಿಸಿದೆ.ಮಂಗಳೂರು ಬಂದರಿನಲ್ಲಿ ಸಾವಿರಕ್ಕೂ ಅಧಿಕ ಬೋಟ್‌ಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿನಿತ್ಯ ದುಡಿಯುತ್ತಿದ್ದರು.
ಲಾಕ್‌ಡೌನ್ ಬಳಿಕ ಕಾರ್ಮಿಕರೆಲ್ಲಾ ತಮ್ಮೂರಿಗೆ ಮರಳಿದ್ದು, ಇದೀಗ ಮೀನುಗಾರಿಕಾ ಋತುವೂ ಅಂತ್ಯಗೊಂಡಿದ್ದು, ವರ್ಷ ಪೂರ್ತಿ ನಷ್ಟದಲ್ಲೇ ಮೀನುಗಾರಿಕಾ ಉದ್ಯಮ ಕಳೆದಿದೆ.