
ದೇವದುರ್ಗ: ರಾಯಚೂರು ಜಿಲ್ಲೆಯ ದೇವದುರ್ಗದಿಂದ ಧರ್ಮಸ್ಥಳಕ್ಕೆ ಸಂಪರ್ಕ ಕೊಂಡಿಯಾಗಿ ಹೊಸ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಬುಧವಾರ ಚಾಲನೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈ ಪ್ರದೇಶದಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಗಮನ ಸೆಳೆದಿದೆ. ಜೊತೆಗೆ ಮಹಿಳೆಯರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ನಮ್ಮ ಕ್ಷೇತ್ರದ ಪ್ರಯಾಣಿಕರಿಗೆ ಈ ಹೊಸ ಬಸ್ ಸಂಚಾರ ತುಂಬಾ ಪ್ರಯೋಜನವಾಗಲಿದ್ದು, ನಾನೂ ಕೂಡ ಒಂದು ದಿನ ಇದೇ ಬಸ್‌ನಲ್ಲಿ ಧರ್ಮಸ್ಥಳಕ್ಕೆ ಹೋಗುವ ಸಂಕಲ್ಪ ಮಾಡಿದ್ದೇನೆ. ನಮ್ಮ ಕ್ಷೇತ್ರಕ್ಕೆ ಹೊಸದಾಗಿ 16 ಬಸ್‌ಗಳನ್ನು ಒದಗಿಸಬೇಕೆಂದು ಈಗಾಗಲೇ ಸಚಿವ ರಾಮಲಿಂಗಾರೆಡ್ಡಿರಿಗೆ ಮನವಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಿ, ಸರಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವದು ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಬಳೆ, ರೇಣುಕಾ ಮಯೂರ ಸ್ವಾಮಿ, ದೊಡ್ಡ ರಂಗಣ್ಣಗೌಡ, ರಾಜಾ ರಂಗಪ್ಪ ನಾಯಕ, ಗೋವಿಂದ ರಾಜ್ ನಾಯಕ ಚಿಕ್ಕ ಗುಡ್ಡ. ದಾವುದ್ ಔಂಟಿ ಪ್ರಭು ದೊರೆದೇವದುರ್ಗ ಈಶಪ್ಪ, ಬಸವರಾಜ ಯರಮಸಾಳ, ನಬಿ ರಸೂಲ್ ಗೌರಂಪೇಟೆ, ಇಸಾಕ್ ಮೇಸ್ತಿç, ಶರಣಗೌಡ ಹೂವಿನಹೆಡ್ಗಿ ಶಾಲಂ ಉದ್ದಾರ್, ಡಿಪೋ ವ್ಯವಸ್ಥಾಪಕ ರಾಮನಗೌಡ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಜೇಶ ಎಂ. ಹಾಗೂ ಇತರರು ಇದ್ದರು.