ತಿರುಪತಿ: ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಡಿ.ಎಸ್‌ಪಿ ಅಧಿಕಾರಿಯಾಗಿರುವ ತಮ್ಮ ಪುತ್ರಿಗೆ ಪೊಲೀಸ್ ಮೀಟ್ ಸಭೆಯ ವೇಳೆ ಸೆಲ್ಯೂಟ್ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ತಿರುಪತಿಯಲ್ಲಿ ಸೋಮವಾರದಿಂದ ‘ಪೊಲೀಸ್ ಡ್ಯೂಟಿ ಮೀಟ್’ ಸಭೆ ನಡಯುತ್ತಿದ್ದು, ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡುವ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶ್ಯಾಂ ಅವರು ತಮ್ಮ ಪುತ್ರಿ ಪ್ರಶಾಂತಿಗೆ ಸೆಲ್ಯೂಟ್ ಮಾಡಿದ್ದಾರೆ. ಪ್ರಶಾಂತಿ ಕೂಡ ತಂದೆಗೆ ಮರು ಸೆಲ್ಯೂಟ್ ಮಾಡಿ ಅಭಿಮಾನ ಮೆರೆದಿದ್ದಾರೆ. ತಂದೆ ಮಗಳ ಈ ಹೃದಯಸ್ಪರ್ಶಿ ಕ್ಷಣಗಳಿಗೆ ತಿರುಪತಿ ಎಸ್‌ಪಿ ರಮೇಶ್ ರೆಡ್ಡಿ ಸಾಕ್ಷಿಯಾದರು.
ಪ್ರಸ್ತುತ ಪ್ರಶಾಂತಿ ಗುಂಟೂರು ಜಿಲ್ಲೆಯ ಡಿಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ಯಾಂ ಅವರು ತಿರುಪತಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗಳಿಗೆ ತಂದೆ ಸೆಲ್ಯೂಟ್ ಮಾಡುವ ಫೋಟೊವನ್ನು ಆಂಧ್ರಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.