ಅಸ್ಸಾಂ: ಸಿಡಿಲ ಬಡಿತಕ್ಕೆ 18 ಆನೆಗಳು ಮೃತಪಟ್ಟಿರುವ ದಾರುಣ ಘಟನೆ ಅಸ್ಸಾಂನ ನಗೂನ್ ಜಿಲ್ಲೆಯ ಬಮುನಿ ಬೆಟ್ಟದ ತುದಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಆನೆಗಳು ಸಿಡಿಲ ಬಡಿತಕ್ಕೆ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಆನೆಗಳ ಸಾವಿನ ಸಂಖ್ಯೆ ಖಚಿತಪಡಿಸಿಕೊಳ್ಳಲು ಮತ್ತು ಸಾಮೂಹಿಕ ಸಾವಿಗೆ ಕಾರಣ ಬೇರೆ ಏನಾದರೂ ಇರಬಹುದು ಎಂದು ತಿಳಿಯಲು ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಈ ಘಟನೆ ನಗೂನ್ ಅರಣ್ಯ ವಲಯದಲ್ಲಿ ಬರುವ ಕತೈಟೊಲಿ ರೇಂಜ್ನ ಕಂಡೊಲಿ ಪ್ರಪೂಸ್ಡ್ ರಿಸರ್ವ್ಡ್ ಫಾರೆಸ್ಟ್ (ಪಿಆರ್ಎಫ್)ನಲ್ಲಿ ನಡೆದಿದೆ.
ಆನೆಗಳು ಸಾವಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ನಾವು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದೆವು.
ಬಳಿಕ ನೆಲದ ಮೇಲೆ ಸತ್ತು ಬಿದ್ದಿದ್ದ ಆನೆಗಳ ಕಳೇಬರವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಪರಿಸರ ಮತ್ತು ಅರಣ್ಯ ಸಚಿವ ಪರಿಮಳ್ ಸುಕ್ಲಾಬೈದ್ಯ, ಈ ಘಟನೆಯಿಂದಾಗಿ ನನಗೆ ಅತೀವ ನೋವು ಉಂಟಾಗಿದೆ. ನಾನು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈಗಾಗಲೇ ಉನ್ನತ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಶುವೈದ್ಯರು ಸಹ ಭೇಟಿ ನೀಡಿದ್ದಾರೆಂದು ತಿಳಿಸಿದರು.
ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.