ಹಾಸನ: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಳ್ಳಾವರ ಗ್ರಾಮದಲ್ಲಿ ನರಹಂತಕ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಅರಣ್ಯ ಇಲಾಖೆ, ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಹಾಗೂ ತಜ್ಞರ ತಂಡ ಸತತ ಮೂರು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ಫಲ ನೀಡಿದೆ.
ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ ಪಶುವೈದ್ಯ ಡಾ. ರಮೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ಚುಚ್ಚುಮದ್ದು ನೀಡಿದ ನಂತರವೂ ಕಾಡಾನೆ ಸುಮಾರು ಎರಡು ಗಂಟೆಗಳ ಕಾಲ ನಿತ್ರಾಣಗೊಳ್ಳದೆ ಓಡಾಡಿದೆ. ಈ ಅವಧಿಯಲ್ಲಿ ಐದು ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ETF ಸಿಬ್ಬಂದಿ ಕಾಡಾನೆಯನ್ನು ಬೆನ್ನುಬಿದ್ದು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು.
ಸುಮಾರು ಹನ್ನೆರಡು ಕಿಲೋಮೀಟರ್ ದೂರ ಓಡಾಡಿದ ನಂತರ ಕಾಡಾನೆ ಕೊನೆಗೂ ನಿತ್ರಾಣಗೊಂಡು ನೆಲಕ್ಕುರುಳಿದೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡುತ್ತಿದ್ದಾರೆ. ಮುಂದಿನ ಹಂತದಲ್ಲಿ ತಜ್ಞರು ಕಾಡಾನೆಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಲಿದ್ದು, ಐದು ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.
ಕಾರ್ಯಾಚರಣೆ ಸ್ಥಳದಲ್ಲೇ ಡಿಎಫ್‌ಓ ಸೌರಭ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ನರಹಂತಕ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿರುವುದರಿಂದ ಸ್ಥಳೀಯರಲ್ಲಿ ನಿಟ್ಟುಸಿರು ಬಿಡುವಂತಾಗಿದೆ.






