ಬೆಳ್ತಂಗಡಿ: ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಟೆಕ್ನೋ ಸ್ಕೂಲ್ಗೆ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಇಲಾಖೆಯಿಂದ ಅಗತ್ಯ ಅನುಮತಿ ದೊರೆತಿರುವ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ. ಇತ್ತೀಚೆಗೆ ಶಾಲೆಯ ಅನುಮತಿ ಕುರಿತಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ಸಂಸ್ಥೆಯ ಆಡಳಿತ ಮಂಡಳಿ ಮುಂದಾಗಿದೆ.

ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಪ್ರಿ-ಪ್ರೈಮರಿ ರಿಂದ ಹತ್ತನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯು ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ಇರುವ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಈ ಕಟ್ಟಡಕ್ಕೆ ಸರ್ಕಾರದ ಎಲ್ಲಾ ಸಂಬಂಧಿತ ಇಲಾಖೆಗಳ ಅಗತ್ಯ ಅನುಮತಿಗಳು ದೊರೆತಿವೆ ಎಂದು ಸಂಸ್ಥೆ ತಿಳಿಸಿದೆ.

ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ನಿಯಮಾನುಸಾರ ಅಗ್ನಿ ಸುರಕ್ಷತೆಯ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದ್ದು, ಅಧಿಕಾರಿಗಳ ಪರಿಶೀಲನೆಯ ಬಳಿಕ 25-07-2025 ರಂದು ಸಮಾಪನ ಪತ್ರ (ಸಂ. ಜಿಬಿಸಿ.(2)918/2025, E-Office Com No.59264) ನೀಡಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಶಾಲೆಯ ಬಗ್ಗೆ ಹರಿದಾಡುತ್ತಿರುವ ಯಾವುದೇ ಗಾಳಿ ಸುದ್ದಿಗಳನ್ನು ನಂಬದೆ, ವಿದ್ಯಾರ್ಥಿಗಳು ಹಾಗೂ ಪೋಷಕರು ವಿಚಲಿತರಾಗಬಾರದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. ವಿದ್ಯಾರ್ಥಿಗಳ ಸುರಕ್ಷತೆ, ಕ್ಷೇಮಪಾಲನೆ ಹಾಗೂ ಸರ್ಕಾರದ ಎಲ್ಲಾ ನಿಯಮಗಳಿಗೆ ಸದಾ ಅಗ್ರ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





