ಮಂಗಳೂರು: ಕುಟುಂಬದಲ್ಲಿ ದಂಪತಿಗಳಿಬ್ಬರ ನಡುವೆ ನಡೆದ ಕಲಹದಿಂದ ಬೇಸತ್ತ ವಿವಾಹಿತ ಯುವಕನೊಬ್ಬ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಪಣಂಬೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಕಾವೂರು ಅಂಬಿಕಾ ನಗರ ನಿವಾಸಿಯೋರ್ವರು ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟವರಾಗಿದ್ದು ಹೆಂಡತಿ ಜೊತೆ ಜಗಳಕ್ಕೆ ಬೇಸತ್ತ ಪತಿ ಸೋಮವಾರ ಸಂಜೆ ತನ್ನ ಮಗಳನ್ನು ತಣ್ಣೀರುಬಾವಿ ಬೀಚ್ ಗೆ ಕರೆದುಕೊಂಡು ಹೋಗಿದ್ದು ನಾವು ಸಾಯೋಣ ಮಗಳೇ, ನಿನ್ನ ತಾಯಿ ಅವಳಿಗೆ ಬೇಕಾದ ರೀತಿ ಇರಲಿ, ನಿನ್ನ ತಾಯಿ ಸರಿ ಇಲ್ಲ ನಮಗೆ ಯಾರೂ ಬೇಡ ಎನ್ನುತ್ತಾ ಸಮುದ್ರದ ನೀರಿನತ್ತ ನಡೆಯುತ್ತಾ ಈ ರೀತಿ ವಿಡಿಯೋ ಮಾಡಿದ್ದಾನೆ.
ವಿಡಿಯೋದಲ್ಲಿ ತುಳುವಿನಲ್ಲಿ ಮಾತನಾಡುತ್ತ ಸಮುದ್ರ ಕಡೆಗೆ ಹೋಗುವುದು ಮಾತ್ರ ಇತ್ತು. ಎಲ್ಲಿಯ ವಿಡಿಯೋ ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ಸಣ್ಣ ಮಗು ಸಾಯೋದು ಬೇಡಪ್ಪಾ ಎನ್ನುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದ್ದು ಎಂತವರನ್ನು ಮನಕಲುಕುವಂತೆ ಮಾಡುವಂತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಪಣಂಬೂರು ಪೊಲೀಸರಿಗೆ ತಲುಪಿತ್ತು. ಆದರೆ ವಿಡಿಯೋದಲ್ಲಿ ಆ ವ್ಯಕ್ತಿಯ ಮುಖ ಚಹರೆ ಕಾಣುತ್ತಿರಲಿಲ್ಲ. ಕೇವಲ ಸಮುದ್ರದ ನೀರಿನ ಕಡೆಗೆ ನಡೆಯುತ್ತಾ ಹೋಗುವುದು, ಅದರಲ್ಲಿ ತಂದೆ- ಮಗಳ ನೆರಳು ಮಾತ್ರ ಇತ್ತು. ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ತಣ್ಣೀರುಬಾವಿ ಸಮುದ್ರ ತೀರಕ್ಕೂ ಪೊಲೀಸ್ ಸಿಬ್ಬಂದಿ ತೆರಳಿ ಅಲ್ಲಿಯೂ ಹುಡುಕಿದ್ದಾರೆ. ಈ ವೇಳೆ ಮಗುವಿನ ಜೊತೆಗೆ ಒಬ್ಬಾತ ಬಂದಿದ್ದು ಹೌದು ಎನ್ನುವ ಮಾಹಿತಿ ಲಭಿಸಿತ್ತು. ಕೂಡಲೇ ಪೊಲೀಸರು ಯುವಕನ ವಿಳಾಸ ಪತ್ತೆ ಹಚ್ಚಿ ಕಾವೂರು ಅಂಬಿಕಾ ನಗರದಲ್ಲಿರುವ ಯುವಕನ ಮನೆ ವಿಳಾಸಕ್ಕೆ ತೆರಳಿದ ಪೊಲೀಸರು, ಮನೆಯ ಒಳಗೆ ತೆರಳಿದಾಗ ತಂದೆ ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ರೆಡಿಯಾಗಿದ್ದ ಇದನ್ನು ಕಂಡ ಪೊಲೀಸರು ಕೂಡಲೇ ಆತನನ್ನು ಹಿಡಿದುಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದ ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ. ಕೆಲವೇ ಕ್ಷಣ ತಡವಾದರೂ ಇಬ್ಬರ ಪ್ರಾಣ ಹೋಗುತ್ತಿತ್ತು. ಇದೀಗ ಪೋಲೀಸರ ತುರ್ತು ಸ್ಪಂದನೆಯಿಂದ ಎರಡು ಜೀವಗಳು ಬದುಕುಳಿದಂತಾಗಿದೆ. ಈ ಬಗ್ಗೆ ಪೋಲೀಸರ ಮಹಾತ್ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.





