ಹಾಸನ: ಹಾಸನ ಪೊಲೀಸರು ನಡೆಸಿದ ಕ್ಷೀಪ್ರ ಕಾರ್ಯಾಚರಣೆಯಲ್ಲಿ ಮೀನು ಸಾಗಾಟದ ಸೋಗಿನಲ್ಲಿ ಮಂಗಳೂರಿಗೆ ಗೋ ಮಾಂಸ ತರುತ್ತಿದ್ದ ಏಳು ವಾಹನಗಳನ್ನು ವಶಕ್ಕೆ ಪಡೆದಿದ್ದು ಇಬ್ಬರನ್ನು ಬಂಧಿಸಿದ್ದಾರೆ.
ಮೀನು ಸಾಗಾಟದ ಟೆಂಪೋದಲ್ಲಿ ಪ್ಲಾಸ್ಟಿಕ್ ಪ್ಯಾಕ್ ನಲ್ಲಿ ಸುತ್ತಿಟ್ಟ ಬರೊಬ್ಬರಿ ನಾಲ್ಕು ಟನ್ ಮಾಂಸ ಪತ್ತೆಯಾಗಿದೆ. ಈ ಮಾಂಸವನ್ನು ಮಂಗಳೂರಿನ ಮಾರುಕಟ್ಟೆಗೆ ತರಲಾಗುತ್ತಿತ್ತು ಎನ್ನಲಾಗಿದೆ.
ಹಾಸನದ ಆಲೂರು ಪೊಲೀಸ್ ಠಾಣೆಯ ಪೋಲೀಸರು ಗಸ್ತಿನಲ್ಲಿದ್ದಾಗ ಖಚಿತ ಮಾಹಿತಿ ದೊರೆತು ಆಲೂರಿನ ಪ್ರಕೃತಿ ನಗರದ ಶೆಡ್ಡಿಗೆ ದಾಳಿ ನಡೆಸಿದ್ದರು. ಪೊಲೀಸರು ದಾಳಿ ನಡೆಸಿದ್ದನ್ನು ನೋಡಿ ಅಲ್ಲಿದ್ದವರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಆಸುಪಾಸಿನಲ್ಲಿ ಶೋಧ ನಡೆಸಿದ್ದು ಮುನ್ನಾ ಎಂಬಾತ ಪೊದೆಗಳ ಎಡೆಯಲ್ಲಿ ಅಡಗಿಕೊಂಡಿದ್ದು ಪತ್ತೆಯಾಗಿದ್ದು ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಪ್ರಶ್ನಿಸಿದಾಗ ಅಕ್ರಮವಾಗಿ ಗೋಮಾಂಸವನ್ನು ಸಾಗಿಸಲು ಯೋಜನೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ.
ನೂತನ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗೋಮಾಂಸ ಪತ್ತೆಯಾದ ಮೊದಲ ಪ್ರಕರಣವಾಗಿದ್ದು ಪೊಲೀಸರು ಇತರೇ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಏಳು ವಾಹನಗಳನ್ನು ಜಪ್ತಿ ಮಾಡಿದ್ದು ಹೊಸ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.