ಬೆಳ್ತಂಗಡಿ: ಕಾರ್ಗಿಲ್ ಯುದ್ಧದ ವಿಜಯದ ಬಳಿಕ ನಮ್ಮ ದೇಶವನ್ನು ಕಾಯುವ ವೀರ ಯೋಧರನ್ನು ಗುರುತಿಸಿ ಗೌರವಿಸುವ ನಾಗರಿಕ ಪ್ರಜ್ಞೆ ಹೆಚ್ಚಾಗಿದೆ ಎಂದು ಅಂಕಣಕಾರ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು.
ಅವರು ಅಕ್ಟೋಬರ್ 2ರಂದು ಮದ್ದಡ್ಕದ ವೀರಯೋಧ ಏಕನಾಥ ಶೆಟ್ಟಿ ಸಭಾ ವೇದಿಕೆಯಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮದ 35 ಸಂಘ ಸಂಸ್ಥೆಗಳು ಒಟ್ಟು ಸೇರಿ ಭಾರತೀಯ ಭೂಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಯೋಧ ಮಂಜುನಾಥರವರಿಗೆ ಹಾಗೂ ನಮ್ಮೂರ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ ‘ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಗೌಡ (ವಿ.ಕೆ. ವಿಟ್ಲ)ರವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರಿಬ್ಬರನ್ನೂ ಗೌರವಿಸಿ ಮಾತನಾಡುತ್ತಿದ್ದರು.
ನಮ್ಮ ಮನಸ್ಸಿನ ಮೂಲೆಯಲ್ಲಿ ಅಡಗಿರುವ ಕತ್ತಲೆಯನ್ನು ದೂರಮಾಡಿ ಜ್ಞಾನದ ದೀಪವನ್ನು ಬೆಳಗುವವನು ಗುರು. ಅಂತೆಯೇ ನಮ್ಮ ಜೀವನಕ್ಕೆ ಸುಭದ್ರವಾದ ಅಡಿಪಾಯವನ್ನು ಹಾಕಿ ದೇಶದ ಗಡಿ ಭಾಗದಲ್ಲಿ ನಿಂತು ಹೋರಾಟ ಮಾಡುವವನು ಯೋಧ. ಇವರಿಬ್ಬರನ್ನೂ ಗುರುತಿಸಿ ಗೌರವಿಸುವುದರ ಮೂಲಕ ಈ ಭಾಗದ ನಾಗರಿಕರ ನಿಜವಾದ ಜವಾಬ್ದಾರಿ ಏನೆಂಬುದನ್ನು ತೋರಿಸಿಕೊಟ್ಟಿರುವುದು ಸಂತಸದ ವಿಷಯ. ದೇಶಕ್ಕೆ ಆದರ್ಶವಾಗಿರಬೇಕಾಗಿರುವುದು, ದಾರಿ ತೋರಿಸಬೇಕಾಗಿರುವುದು ನಮ್ಮ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯನ್ನು ಮಾಡಬೇಕಾಗಿರುವವರು ಒಬ್ಬ ಯೋಧ ಹಾಗೂ ಮತ್ತೊಬ್ಬ ಶಿಕ್ಷಕ ಎಂದು ಗೋಖಲೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ವಹಿಸಿ ಮಾತನಾಡಿ; ಇಂದಿನ ’ಶಿಕ್ಷಕ-ರಕ್ಷಕ’ ಅಭಿನಂದನಾ ಸಮಾರಂಭ ಅನುಕರಣೀಯ.
ಅಭಿನಂದನೆಯನ್ನು ಸ್ವೀಕರಿಸಿದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ. ವಿಟ್ಲ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕರು ನಾಗರಿಕ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ. ಪ್ರಭಾಕರ ಬಂಗೇರ ಉಪಸ್ಥಿತರಿದ್ದರು. ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಬೆಳ್ತಂಗಡಿಯ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಸ್ವಾಗತಿಸಿ, ನಾಗರಿಕ ಅಭಿನಂದನಾ ಸಮಿತಿ ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು. ನಿತಿನ್ ಗುರುವಾಯನಕೆರೆ ನಿರೂಪಿಸಿದರು.
ಲಾಯಿಲಾ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಿನ್ನಿಗೋಳಿಯವರೆಗೆ ಯೋಧರರಾದ ಮಂಜುನಾಥ್‌ರವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ. ವಿ.ಕೆ. ವಿಟ್ಲರವರನ್ನು ಗುರುವಾಯನಕೆರೆಯಲ್ಲಿ ಸ್ವಾಗತಿಸಿ. ಮದ್ದಡ್ಕ-ಕಿಗೋಳಿಯಿಂದ ಭವ್ಯ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ಸೈನಿಕ-ಶಿಕ್ಷಕರನ್ನು ಸಭಾಂಗಣಕ್ಕೆ ಕರೆತರಲಾಯಿತು. ನಂತರ ವೈಯಕ್ತಿಕ ಹಾಗೂ ಸಂಘ-ಸಂಸ್ಥೆಗಳಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ವಿದ್ವತ್ ಕಾಲೇಜಿನ ಮುಖ್ಯಸ್ಥರಾದ ಸುಭಾಶ್ಚಂದ್ರ ಶೆಟ್ಟಿ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಅರಮಲೆ ಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುಕೇಶ್ ಕುಮಾರ್ ಕಡಂಬು, ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರುಬೀಡು, ಅಭಿನಂದನಾ ಸಮಿತಿ ಸಂಚಾಲಕ ಗಂಗಾಧರ ರಾವ್ ಕೆವುಡೇಲು, ಬಳ್ಳಮಂಜ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಹರ್ಷ ಸಂಪಿಗೆತ್ತಾಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ. ಜೈನ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕ ಅಭಿನಂದನಾ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು.