
ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ತನ್ಮೂಲಕ ಪರೋಕ್ಷವಾಗಿ ಹಿಂದೂ ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ, ಧಾರ್ಮಿಕ ಭಾವನೆಗಳನ್ನು,ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ಮಾಡಿ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಿತ ರಕ್ಷಣಾ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ವೃಂದಗಳ ವೇದಿಕೆ ಹಾಗೂ ಇನ್ನಿತರ ಸಂಘಸಂಸ್ಥೆಗಳ ಒಕ್ಕೂಟದಿಂದ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಪ್ರತಿಭಟನಾಕಾರರು, ದಕ್ಷಿಣ ಭಾರತದ ಮತ್ತು ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಕನಿಷ್ಠ 800 ವರ್ಷಗಳ ಇತಿಹಾಸ ಹೊಂದಿದ್ದು, ದಕ್ಷಿಣ ಕಾಶಿ ಎಂದೇ ಜನಜನಿತ ವಾಗಿರುತ್ತದೆ. ಈ ಕ್ಷೇತ್ರವು ಕೋಟ್ಯಾಂತರ ಭಕ್ತಾದಿಗಳನ್ನು ಭಾಷೆ ಗಡಿಗಳನ್ನು ಮೀರಿ ಪ್ರತಿನಿತ್ಯ ಮೂವತ್ತರಿಂದ ಐವತ್ತು ಸಾವಿರ ಭಕ್ತರು, ವಿಶೇಷ ದಿನಗಳಲ್ಲಿ ಹೊಂದಿದ್ದು ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಾರೆ ಇಂತಹ ಶ್ರೀಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ನೆಲೆಯೂರಿರುವ ಈ ಪವಿತ್ರ ಸ್ಥಳದ ಹೆಸರನ್ನು ಬಹಳ ಚಾಕಚಕ್ಯತೆಯಿಂದ ಕೇವಲ ಧರ್ಮಸ್ಥಳ ಎಂಬ ಹೆಸರನ್ನೇ ಉಪಯೋಗಿಸಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಯವರಿಗೆ ಕಳಂಕ ತರುವಂತಹ, ಪಾವಿತಕ್ಕೆ ಧಕ್ಕೆಯುಂಟು ಮಾಡುವಂತಹ ಕೀಳು ಮಟ್ಟದ ಅಸಾಂವಿಧಾನಿಕ ಭಾಷೆಗಳ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಇಡೀ ರಾಜ್ಯಕ್ಕೆ ತಿಳಿದಿದೆ.ಇದು ಶ್ರೀ ಕ್ಷೇತ್ರದ ತೇಜೋವಧೆ ಮಾಡಲೇಂದೇ ಮಾಡುತ್ತಿರುವ ಷಡ್ಯಂತ್ರ ಎಂದು ದಾರಿಯಲ್ಲಿ ಹೋಗುತ್ತಿರುವ ಶ್ರೀಸಾಮಾನ್ಯರಿಗೂ ತಿಳಿಯಲ್ಪಡುವ ವಿಚಾರವಾಗಿದೆ. ಈ ಬೆಳವಣಿಗೆ ಭಕ್ತರ ಮನಸ್ಸಿಗೆ ಅತೀವವಾದ ನೋವುಂಟು ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುತ್ತದೆ.
ಅನಾಮಿಕ ಎಂಬ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಸಮಸ್ತ ಭಕ್ತಾದಿಗಳು, ಹಿಂದೂ ಬಾಂಧವರೆಲ್ಲರೂ ಗೌರವದಿಂದ ಸ್ವಾಗತಿಸಿ ತನಿಖೆಯು ಅರ್ಥಪೂರ್ಣವಾಗಬೇಕೆಂದು ಬಯಸುತ್ತೇವೆ. ಆದರೆ ಮಾಧ್ಯಮಗಳ ಪ್ರಕಾರ ಆರನೇ ಗುಂಡಿಯನ್ನು ಬಿಟ್ಟರೆ ಇನ್ನೆಲ್ಲೂ ಸಾಕ್ಷಾಧಾರಗಳು ದೊರಕದಿರುವುದು ಹಾಗೂ ಇತ್ತೀಚಿಗಂತೂ ಪವಿತ್ರವಾದ ಬೆಟ್ಟದ ಬುಡದಲ್ಲೂ ಸಹ ಉತ್ಪನ್ನ ಮಾಡಿದ ನಂತರವೂ ಸಹ ಯಾವ ಸಾಕ್ಷಾಧಾರಗಳು ದೊರಕದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಅನಾಮಿಕನ ಉದ್ದೇಶವೇ ಅನುಮಾನಾಸ್ಪದವಾಗಿ ಕಂಡು ಬರುತ್ತಿರುವುದು ಗೋಡೆಯ ಮೇಲಿನ ಬರಹದಂತೆ ನಿಚ್ಚಳವಾಗಿದೆ ಎಂದರು.ಅನಾಮಿಕನನ್ನು ಮಂಪರು ಪರೀಕ್ಷೆ ಇತ್ಯಾದಿ ಪರೀಕ್ಷೆಗಳ ಮೂಲಕ ಸಂಪೂರ್ಣವಾಗಿ ತನಿಖೆಗೊಳ ಪಡಿಸಬೇಕು ಹಾಗೂ ಆತನ ಬೆಂಬಲಕ್ಕೆ ನಿಂತಿರುವ, ಹಿಂದಿರುವವರ ಬಗ್ಗೆ ಸಹ ಸಂಪೂರ್ಣವಾದ ತನಿಖೆಯನ್ನು ನಡೆಸಬೇಕೆಂದು, ಈ ಬಗ್ಗೆ ತನಿಖಾ ವರದಿಯನ್ನು ಸಾರ್ವಜನಿಕರ ಅನುಮಾನಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ತಿಳಿಸಬೇಕು ಧರ್ಮಾಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ, ಕ್ಷೇತ್ರದ ಪಾವಿತ್ರ ಧಕ್ಕೆ ತರುತ್ತಿರುವವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು, ವಕೀಲರು, ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಸಂಘ-ಸಂಸ್ಥೆಯವರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.