ನವದೆಹಲಿ: ನರೇಂದ್ರ ಮೋದಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇವರ ಹೆಸರಿನಲ್ಲಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಅಂದರೆ ಕರ್ನಾಟಕದಿಂದ ಆಯ್ಕೆಯಾದ ಎನ್‌ಡಿಎ ಸಂಸದರ ಪೈಕಿ ಹೆಚ್‌ಡಿ ಕುಮಾರಸ್ವಾಮಿ ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್‌ಡಿ ಕುಮಾರಸ್ವಾಮಿಗೆ ಯಾವ ಖಾತೆ ನೀಡಲಾಗುತ್ತದೆ ಅನ್ನೋ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಈ ಪೈಕಿ ಕೃಷಿ ಖಾತೆ ನೀಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಎನ್‌ಡಿಎ ಮೈತ್ರಿ ಸರ್ಕಾರದಲ್ಲಿ ಹೆಚ್‌ಡಿ ಕುಮಾರಸ್ವಾಮಿಗೆ ಪ್ರಮುಖ ಖಾತೆ ನೀಡುವ ಸಾಧ್ಯತೆ ಹೆಚ್ಚಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿತ್ತು. 3 ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸಿತ್ತು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮುಗ್ಗರಿಸಿದ ಜೆಡಿಎಸ್, ಮಂಡ್ಯ ಹಾಗೂ ಕೋಲಾರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಮಂಡ್ಯದಿಂದ ಸಂಸದರಾಗಿ ಆಯ್ಕೆಯಾದ ಕುಮಾರಸ್ವಾಮಿಗೆ ಮೋದಿ ಮೂರನೇ ಅವಧಿಯ ಸರ್ಕಾರದಲ್ಲಿ ಮಂತ್ರಿಗಿರಿ ನೀಡಲಾಗಿದೆ. ಶೀಘ್ರದಲ್ಲೇ ಖಾತೆ ಹಂಚಿಕೆ ನಡೆಯಲಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಗೈರಾಗಿದ್ದಾರೆ. ಆರೋಗ್ಯದ ಕಾರಣ ದೇವೇಗೌಡರು ದೆಹಲಿಗೆ ತೆರಳಿಲ್ಲ. ಈ ಕುರಿತು ಮೋದಿಗೆ ಪತ್ರ ಬರೆದಿರುವ ದೇವೇಗೌಡರು, ಅಭಿನಂದನೆ ತಿಳಿಸಿದ್ದಾರೆ.