ಶೃಂಗೇರಿ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಶೃಂಗೇರಿ ಶಾರದಾಂಬ ದೇಗುಲದ ಪ್ರವಾಸ ಮುಂದೂಡುವುದು ಉತ್ತಮ ಜೊತೆಗೆ ನದಿಯ ದಡದಿಂದ ದೂರವಿರಲು ಆಡಳಿತ ಮಂಡಳಿ ಸೂಚಿಸಿದೆ.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾಯದ ಮಟ್ಟವನ್ನು ಮೀರಿ ತುಂಗಾ ನದಿ ಹರಿಯುತ್ತಿದೆ.ಇದರಿಂದ ದೇವಾಲಯದ ಸುತ್ತಮುತ್ತ ಪ್ರವಾಹ ಉಂಟಾಗಿದ್ದು, ದೇಗುಲದ ಬಳಿಯಿರುವ ಸ್ನಾನಘಟ್ಟ ಮುಳುಗಡೆಯಾಗಿದೆ. ಶೃಂಗೇರಿಯ ಐಬಿ ಮತ್ತು ಮಠದಲ್ಲಿರುವ ಮಳೆ ಮಾಪಕದ ಪ್ರಕಾರ, ಭಾನುವಾರ ಬೆಳಗ್ಗೆ 6.00 ರಿಂದ ಸೋಮವಾರ ಬೆಳಗ್ಗೆ 6.00 ವರೆಗೆ ಬರೋಬ್ಬರಿ ಆರು ಇಂಚು ಅಂದರೆ ಸುಮಾರು 15 cm ಕ್ಕೂ ಅಧಿಕ ಮಳೆಯಾಗಿದೆ ಎಂದು ವರದಿಯಾಗಿದೆ. ಅಲ್ಲದೇ ನೆರೆ ನೀರಿನಿಂದಾಗಿ ದೇಗುಲ ಸಮೀಪದ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿದ್ದು, ಹಲವು ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಜೊತೆಗೆ ಮೈದಾನದಲ್ಲಿ ಜಾನುವಾರುಗಳನ್ನು ಬೋಟ್ ಮೂಲಕ ಸ್ಥಳಾಂತರಿಸಲಾಗಿದೆ. ಸದ್ಯ ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳನ್ನು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಟ್ಯಾಕ್ಟರ್ ಮೂಲಕ ಎಳೆದು ಹೊರ ತಂದಿದ್ದಾರೆ. ಶೃಂಗೇರಿಯ ಪ್ಯಾರಲಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಲಾಗಿದೆ.