ಮಂಗಳೂರು: ಕೊರೋನಾ ನಿಯಮಾನುಸಾರ ಮದುವೆ ಸಮಾರಂಭಗಳಲ್ಲಿ 150 ಜನ ಮಾತ್ರ ಸೇರಬೇಕೆಂಬ ನಿಯಮವಿದ್ದು ಇದೀಗ ಈ ಬಗ್ಗೆ ಜನ ನಿರ್ಲಕ್ಷ್ಯ ವಹಿಸುತ್ತಿರುವ ಬೆನ್ನಲ್ಲೇ ಮಂಗಳೂರು ಮಹಾನಗರಪಾಲಿಕೆ ಮದುವೆ ಹಾಲ್ ಮಾಲೀಕರಿಗೆ ಶಾಕ್ ನೀಡಿದೆ.
ಕೊರೋನಾ ನಿರ್ಬಂಧಗಳಿದ್ದರೂ, ಜನರು ಮೈ ಮರೆತು ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಕೂಡ ಮಾಯವಾಗಿದೆ. ಮದುವೆ ಸಮಾರಂಭಗಳಲ್ಲಂತೂ 150 ಜನರು ಮಾತ್ರ ಸೇರಬೇಕೆಂದಿದ್ದರೂ, ದೊಡ್ಡ ಹಾಲ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಸೇರುತ್ತಿದ್ದಾರೆ. ಇಂಥ ನಿರ್ಲಕ್ಷ್ಯವನ್ನು ಕಂಡು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಈಗ ದಂಡ ಹಾಕಲು ಮುಂದಾಗಿದ್ದಾರೆ.
ಕಂಕನಾಡಿಯ ವೆಲೆನ್ಸಿಯಾ ಚರ್ಚ್ ಹಾಲ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಲ್ಲದೆ, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ವಿಚಾರದಲ್ಲಿ ಪಾಲಿಕೆಯ ಅಧಿಕಾರಿಗಳು 5 ಸಾವಿರ ರೂ. ದಂಡ ಹಾಕಿದ್ದಾರೆ.
ಜನರ ತಪ್ಪೇ ಆಗಿದ್ದರೂ, ಸಂಬಂಧಪಟ್ಟ ಹಾಲ್ ನವರು ಈ ಬಗ್ಗೆ ಶಿಸ್ತು ರೂಪಿಸಬೇಕು, ಅಂತರ ಕಾಯ್ದುಕೊಂಡು ಚೇರ್ ಇರಿಸಬೇಕೆಂದು ಜಿಲ್ಲಾಧಿಕಾರಿಗಳು ನಿಯಮ ರೂಪಿಸಿದ್ದಾರೆ. ಅದರಂತೆ, ಸೀಮಿತ ಸಂಖ್ಯೆಯಲ್ಲಿ ಜನ ಸೇರಬೇಕು, ಎಲ್ಲರೂ ಮಾಸ್ಕ್ ಧರಿಸಿರಬೇಕು ಎಂಬ ಷರತ್ತುಗಳನ್ನೂ ಹೇರಲಾಗಿದೆ.
ಈ ಬಗ್ಗೆ ಸಂಬಂಧಪಟ್ಟವರಾಗಲೀ, ಮದುವೆ ನಡೆಸುವ ಪಾರ್ಟಿಯಾಗಲೀ ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ. ಕಂಕನಾಡಿಯ ಸಮೃದ್ಧಿ ಹಾಲ್ ನಲ್ಲಿ ಕೂಡ ಇದೇ ರೀತಿಯ ನಿಯಮ ಉಲ್ಲಂಘನೆಯಾಗಿದ್ದರಿಂದ ಅಧಿಕಾರಿಗಳು ದಂಡ ವಿಧಿಸಿದ್ದಾರೆ.