ಇಂದಬೆಟ್ಟು : ಭಾವನೆಗಳಿಗೆ ಬೆಲೆ ಕೊಡಿ. ಭಾವನೆಗಳಿಗಿಂತ ದೊಡ್ಡದು ಬೇರೊಂದಿಲ್ಲ. ಭಾವನೆಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಇಂದಬೆಟ್ಟಿನ ಕಲ್ಲಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗವು ಆಯೋಜಿಸಿದ್ದ ‘ಗ್ರಾಮೀಣ ಸರಕಾರಿ ಕನ್ನಡ ಮಾದ್ಯಮ ಶಾಲೆಗಳನ್ನು ಉಳಿಸುವಲ್ಲಿ ಯುವ ಸಹಭಾಗಿತ್ವ’ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಚನೆ ಮಾತಾಗಿ, ಮಾತು ಕೃತಿಯಾಗಿ, ಕೃತಿ ಗುಣವಾಗಿ, ಗುಣ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಆಲೋಚನೆಗಳನ್ನು ಮಾಡಿ. ನನ್ನ ಏಳಿಗೆಗೆ ನಾನೇ ಶಿಲ್ಪಿ ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವಕಾಶವನ್ನು ಬಳಸಿಕೊಳ್ಳಿ ಎಂದರು.
ಅನೇಕ ಸಲ ನಾವು ಸಂತೋಷವನ್ನು ಹೊರಗೆ ಹುಡುಕುವ ಪ್ರಯತ್ನ ಮಾಡುತ್ತೇವೆ. ಆದರೆ ಸಂತೋಷವೆಂಬುದು ನಮ್ಮೊಳಗೇ ಇದೆ. ಜಗತ್ತಿಗೆ ಹೋಲಿಸಿದರೆ ಭಾರತ ಸಂತೋಷವಾಗಿ ಜೀವಿಸಲು ಪ್ರಶಸ್ತವಾದ ಸ್ಥಳ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕಿ ಡಾ. ಧನೇಶ್ವರಿ ಮಾತನಾಡಿ ಶಿಕ್ಷಣ ಕ್ಷೇತ್ರದ ಖಾಸಗೀಕರಣ, ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿ, ಬಡತನದ ಪ್ರತೀಕವೆಂಬ ಅಪಪ್ರಚಾರಗಳು, ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಕುರಿತಾದ ಕೀಳರಿಮೆ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗಲು ಕಾರಣವಾಗಿದೆ. ಕನ್ನಡ ಮಾಧ್ಯಮ ಅಥವಾ ಸರಕಾರಿ ಶಾಲೆಗಳ ಅಭಿವೃದ್ಧಿ ಸಮುದಾಯದಿಂದ ಸಾಧ್ಯವಿದೆ. ಜನರ ಸಹಭಾಗಿತ್ವ ಮತ್ತು ಪೋಷಕರಿಂದ ಬದಲಾವಣೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಲಾಜೆ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾ ಮಾತನಾಡಿ ಗ್ರಾಮೀಣ ಭಾಗದ ಶಾಲೆಯಲ್ಲಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ನಡೆಸಿದ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ರವಿಶಂಕರ್ ಕೆ.ಆರ್ ಮಾತನಾಡಿ ವಿದ್ಯಾರ್ಥಿಗಳು ಜನರೊಂದಿಗೆ ಬೆರೆಯುವ ಅನುಭವ ಪಡೆಯುವುದಕ್ಕಾಗಿ ನಿಮ್ಮೊಂದಿಗೆ ಬೆರೆತಿದ್ದಾರೆ. ಶಾಲೆಯ ನೈಜ ಅಭಿವೃದ್ಧಿ ಊರಿನ ಜನರ ಆಸಕ್ತಿಯಿಂದ ನಿರ್ಧರಿಸುತ್ತದೆ ಎಂದರು.
“ಕೊರೋನಾ ಅವಧಿಯಲ್ಲಿ ಕಳೆಗುಂದಿದ್ದ ಶಾಲೆಗೆ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಹೊಸ ಆಯಾಮ ನೀಡಿದ್ದಾರೆ”.
ಶಶಿಕಲಾ ಅಧ್ಯಕ್ಷರು ಹಳೆವಿದ್ಯಾರ್ಥಿ
ಪಂಚಾಯತ್ ಸದಸ್ಯ ಆನಂದ್ ಅಡೀಲು ಮಾತನಾಡಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುವಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಪಂಚಾಯತ್ ಸದಸ್ಯರು, ಕಲ್ಲಾಜೆ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದ ಹಾಗೂ ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಮುಖ್ಯಸ್ಥ ಪ್ರೊ. ರವಿಶಂಕರ್ ಕೆ. ಆರ್ ಸ್ವಾಗತಿಸಿ, ವಿದ್ಯಾರ್ಥಿನಿ ಅನನ್ಯ ಡಿ. ವಂದಿಸಿದರು.
ವರದಿ : ಸ್ವಸ್ತಿಕ್ ಕನ್ಯಾಡಿ